ಹೆದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಅಝರುದ್ದೀನ್

ಹೈದರಾಬಾದ್,ಸೆ.27: ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಶುಕ್ರವಾರ ಹೈದರಾಬಾದ್ ಕ್ರಿಕೆಟ್ ಸಂಸ್ಥೆ(ಎಚ್‌ಸಿಎ)ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿ ಕ್ರಿಕೆಟ್ ಆಡುವುದರಿಂದ ಆಜೀವ ನಿಷೇಧಕ್ಕೆ ಒಳಗಾಗಿದ್ದ ಅಝರ್ ಜೀವನ ಚಕ್ರ ಒಂದು ಸುತ್ತು ಬಂದಿದೆ.
ಮಾಜಿ ಆಕರ್ಷಕ ಬ್ಯಾಟ್ಸ್‌ಮನ್ ಅಝರ್‌ಗೆ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಮತದಾನದಲ್ಲಿ 173 ಮತಗಳು ಲಭಿಸಿವೆ. ಅವರ ಎದುರಾಳಿ ಪ್ರಕಾಶ್‌ಚಂದ್ರ ಜೈನ್‌ಗೆ 73 ಮತಗಳು ಲಭಿಸಿದ್ದವು. ಅಝರ್ ಅವರ ಸಮಿತಿ ಸ್ಪರ್ಧೆಯಲ್ಲಿ ಜಯ ಸಾಧಿಸಿದೆ.
ಈ ಹಿಂದೆ ತಾಂತ್ರಿಕ ಕಾರಣದಿಂದ 56ರ ಹರೆಯದ ಅಝರ್ ನಾಮಪತ್ರ ತಿರಸ್ಕರಿಸಲ್ಪಟ್ಟಿತ್ತು. ಈ ಹಿಂದೆ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ಕಾಂಗ್ರೆಸ್ ಸಂಸದನಾಗಿ ಆಯ್ಕೆಯಾಗಿದ್ದ ಅಝರ್ 1990ರ ದಶಕದಲ್ಲಿ ಭಾರತ ತಂಡ ಸ್ವದೇಶದಲ್ಲಿ ಇಂಗ್ಲೆಂಡ್, ಶ್ರೀಲಂಕಾ ಹಾಗೂ ಝಿಂಬಾಬ್ವೆ ವಿರುದ್ಧ ಜಯ ಸಾಧಿಸಲು ನೇತೃತ್ವವಹಿಸಿದ್ದರು.
2000ರ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಅಝರ್ ಹೆಸರು ಕೇಳಿಬಂದಾಗ ಭಾರತ ಕ್ರಿಕೆಟ್ ಪ್ರೇಮಿಗಳು ಆಘಾತಕ್ಕೊಳಗಾಗಿದ್ದರು. ಅಝರ್ ವಿರುದ್ಧ ತನಿಖೆ ಸರಿಯಾಗಿ ನಡೆಸಿಲ್ಲ ಎಂದು ಆಂಧ್ರ ಹೈಕೋರ್ಟ್ ತೀರ್ಪು ನೀಡಿತ್ತು. ಭಾರತದ ಪರ 99 ಟೆಸ್ಟ್ ಹಗೂ 334 ಏಕದಿನ ಪಂದ್ಯಗಳನ್ನಾಡಿದ್ದ ಅಝರ್ ಕಳೆದ ವಾರ ಎಚ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.







