ರಾಹುಲ್ ದ್ರಾವಿಡ್ ಕುರಿತು ಶೀಘ್ರವೇ ತೀರ್ಪು: ಬಿಸಿಸಿಐ ಒಂಬುಡ್ಸ್‌ಮನ್

ಮುಂಬೈ, ಸೆ.27: ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ನಿರ್ದೇಶಕ ಹುದ್ದೆಯಲ್ಲಿರುವ ಬ್ಯಾಟಿಂಗ್ ದಂತಕತೆ ರಾಹುಲ್ ದ್ರಾವಿಡ್ ಸ್ವಹಿತಾಸಕ್ತಿ ಸಂಘರ್ಷ ಎದುರಿಸುತ್ತಿದ್ದಾರೆಯೇ ಎಂದು ಶೀಘ್ರವೇ ನಿರ್ಧರಿಸಲಾಗುವುದು ಎಂದು ಬಿಸಿಸಿಐ ಒಂಬುಡ್ಸ್‌ಮನ್ ನಿವೃತ್ತ ಜಸ್ಟಿಸ್ ಡಿ.ಕೆ. ಜೈನ್ ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್‌ಗೆ ಸಮನ್ಸ್ ನೀಡಿದ ಜೈನ್, ದ್ರಾವಿಡ್ ಅವರ ವಿರುದ್ಧ ಕೇಳಿಬಂದಿರುವ ಸ್ವಹಿತಾಸಕ್ತಿ ಸಂಘರ್ಷದ ಕುರಿತು ನಗರದ ಪಂಚತಾರಾ ಹೊಟೇಲ್‌ನಲ್ಲಿ ಗಂಟೆಗಳ ಕಾಲ ವಿಚಾರಣೆ ನಡೆಸಿದರು.
‘‘ನಾನು ಅವರ ಮಾತನ್ನು ಆಲಿಸಿದ್ದೇನೆ. ನನ್ನ ಆದೇಶವನ್ನು ಕಾಯ್ದಿರಿಸಿದ್ದೇನೆ. ಶೀಘ್ರವೇ ನನ್ನ ತೀರ್ಪು ಪ್ರಕಟಿಸುತ್ತೇನೆ’’ ಎಂದು ಜೈನ್ ಹೇಳಿದ್ದಾರೆ.
ಪ್ರಸ್ತುತ ಎನ್‌ಸಿಎ ನಿರ್ದೇಶಕರಾಗಿರುವ ದ್ರಾವಿಡ್ ಇಂಡಿಯಾ ಸಿಮೆಂಟ್‌ನ ಉದ್ಯೋಗಿಯಾಗಿದ್ದಾರೆ. ಸಿಮೆಂಟ್ ಕಂಪೆನಿಯು ಚೆನ್ನೈ ಸೂಪರ್ ಕಿಂಗ್ಸ್ ನ ಮಾಲಕತ್ವ ಹೊಂದಿದೆ. ಲೋಧಾ ಶಿಫಾರಸಿನ ಪ್ರಕಾರ ಬಿಸಿಸಿಐ ಉದ್ಯೋಗಿ ಒಂದೇ ಹುದ್ದೆಯಲ್ಲಿರಬೇಕು.
ಈ ಹಿಂದೆ ಭಾರತ ಎ ಹಾಗೂ ಅಂಡರ್-19 ತಂಡದ ಕೋಚ್ ಆಗಿದ್ದ ದ್ರಾವಿಡ್‌ರನ್ನು ಸಮರ್ಥಿಸಿಕೊಂಡಿರುವ ಆಡಳಿತಾಧಿಕಾರಿಗಳ ಸಮಿತಿ, ದ್ರಾವಿಡ್, ಇಂಡಿಯಾ ಸಿಮೆಂಟ್ಸ್ ಕಂಪೆನಿಯಿಂದ ರಜೆ ಪಡೆದಿದ್ದಾರೆ ಎಂದಿತ್ತು. ದ್ರಾವಿಡ್ ಆಯ್ಕೆಯನ್ನು ಬಿಸಿಸಿಐ ಕಾನೂನು ತಂಡ ಮಾನ್ಯ ಮಾಡಿತ್ತು.







