ಅಫ್ಘಾನಿಸ್ತಾನದ ನೂತನ ಮುಖ್ಯ ಕೋಚ್ ಆಗಿ ಲ್ಯಾನ್ಸ ಕ್ಲೂಸ್ನರ್ ಆಯ್ಕೆ

ಕಾಬೂಲ್, ಸೆ.27: ದ.ಆಫ್ರಿಕದ ಮಾಜಿ ಆಲ್‌ರೌಂಡರ್ ಲ್ಯಾನ್ಸ್ ಕ್ಲೂಸ್ನರ್ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಅಗಿ ನೇಮಕಗೊಂಡಿದ್ದಾರೆ. ಫಿಲ್ ಸಿಮನ್ಸ್‌ರಿಂದ ತೆರವಾದ ಸ್ಥಾನವನ್ನು ಕ್ಲೂಸ್ನರ್ ತುಂಬಿದ್ದಾರೆ ಎಂದು ಅಫ್ಘಾನ್ ಕ್ರಿಕೆಟ್ ಮಂಡಳಿ(ಎಸಿಬಿ)ಶುಕ್ರವಾರ ತಿಳಿಸಿದೆ.
ನಾವು 50ಕ್ಕೂ ಅರ್ಜಿಗಳನ್ನು ಸ್ವೀಕರಿಸಿದ್ದು, ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಹಾಗೂ ದಕ್ಷಿಣ ಆಫ್ರಿಕದ ಟ್ವೆಂಟಿ-20 ತಂಡದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಕ್ಲೂಸ್ನರ್‌ರನ್ನು ಕೋಚ್ ಆಗಿ ನೇಮಿಸಲು ನಿರ್ಧರಿಸಿದ್ದೇವೆ ಎಂದು ಎಸಿಬಿ ತಿಳಿಸಿದೆ.
‘‘ಇಂತಹ ಅವಕಾಶ ಲಭಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಿರ್ಭೀತಿ ಶೈಲಿಯ ಆಟ ಎಲ್ಲರಿಗೂ ಚಿರಪರಿಚಿತವಾಗಿದೆ. ಇನ್ನಷ್ಟು ಕಠಿಣ ಶ್ರಮವಹಿಸಿದರೆ ಅಫ್ಘಾನಿಸ್ತಾನ ತಂಡ ವಿಶ್ವಶ್ರೇಷ್ಠ ತಂಡವಾಗಿ ರೂಪುಗೊಳ್ಳುವ ವಿಶ್ವಾಸ ನನಗಿದೆ. ಅಫ್ಘಾನಿಸ್ತಾನ ತಂಡದೊಂದಿಗೆ ಕಾರ್ಯನಿರ್ವಹಿಸಲು ಎದುರು ನೋಡುತ್ತಿರುವೆ. ಕ್ರಿಕೆಟ್‌ನ್ನು ಮತ್ತೊಂದು ಮಟ್ಟಕ್ಕೆ ಒಯ್ಯಲು ನೆರವಾಗುವೆ’’ ಎಂದು ಕ್ಲೂಸ್ನರ್ ಹೇಳಿದ್ದಾರೆ.





