ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥರಾಗಿ ರೋಹನ್ ಗುಪ್ತಾ ನೇಮಕ
ರಮ್ಯಾ ರಾಜೀನಾಮೆ ನಂತರ ತೆರವಾಗಿದ್ದ ಹುದ್ದೆ

ಹೊಸದಿಲ್ಲಿ: ತನ್ನ ಸೋಶಿಯಲ್ ಮೀಡಿಯಾ ಘಟಕದ ಮುಖ್ಯಸ್ಥ ಹುದ್ದೆಗೆ ಕಾಂಗ್ರೆಸ್ ಇಂದು ರೋಹನ್ ಗುಪ್ತಾ ಅವರನ್ನು ನೇಮಕಗೊಳಿಸಿದೆ. ಈ ವರ್ಷ ಲೋಕಸಭಾ ಚುನಾವಣಾ ಪ್ರಚಾರ ಮುಗಿದ ನಂತರ ಸೋಶಿಯಲ್ ಮೀಡಿಯಾ ಘಟಕ ಹಿಂದಿನ ಮುಖ್ಯಸ್ಥೆ ರಮ್ಯಾ (ದಿವ್ಯ ಸ್ಪಂದನಾ) ರಾಜೀನಾಮೆ ನೀಡಿದ ನಂತರ ತೆರವಾದ ಈ ಹುದ್ದೆಗೆ ಸುಮಾರು ಮೂರು ತಿಂಗಳ ನಂತರ ಪಕ್ಷ ನೇಮಕಾತಿ ನಡೆಸಿದೆ.
ಹರ್ಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ಘೋಷಣೆಯಾದ ಬೆನ್ನಿಗೆ ಈ ನೇಮಕಾತಿ ನಡೆದಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶದ ಮೇರೆ ನಡೆದ ಈ ನೇಮಕಾತಿಯ ಕುರಿತಂತೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿದ್ದಾರೆ.
ಅಹ್ಮದಾಬಾದ್ ಮೂಲದ ಗುಪ್ತಾ ಈ ಹಿಂದೆ ಗುಜರಾತ್ ವಿಧಾನಸಭಾ ಚುನಾವಣೆ ಸಂದರ್ಭ ಪಕ್ಷದ ಸೋಶಿಯಲ್ ಮೀಡಿಯಾ ಅಭಿಯಾನದ ಉಸ್ತುವಾರಿಯಾಗಿ ಪ್ರಮುಖ ಪಾತ್ರ ವಹಿಸಿದ್ದರು. ಎಐಸಿಸಿ ರಾಷ್ಟ್ರೀಯ ಮಾಧ್ಯಮ ಸಂಘಟಕರಾಗಿರುವ ಅವರ ನೇಮಕಾತಿಯೊಂದಿಗೆ ಮುಂಬರುವ ರಾಜ್ಯ ಚುನಾವಣೆಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪಕ್ಷ ಇನ್ನಷ್ಟು ಸಕ್ರಿಯವಾಗುವ ನಿರೀಕ್ಷೆಯಿದೆ.





