ರಿಯಾದ್: ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ ಕುಟುಂಬ ಸಂಗಮ

ರಿಯಾದ್: ಸೌದಿ ಅರೇಬಿಯಾದಲ್ಲಿರುವ ಕರ್ನಾಟಕ ಮೂಲದ ಪ್ರಮುಖ ಸಾಮಾಜಿಕ ಸಂಘಟನೆ ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (ಡಿಕೆಎಂಒ) ರಿಯಾದ್ ವತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಅನಿವಾಸಿ ಕನ್ನಡಿಗರ ಕುಟುಂಬ ಸಂಗಮ ಗ್ರ್ಯಾಂಡ್ ಫ್ಯಾಮಿಲಿ ಮೀಟ್ – 2019 ಅ. 3ರಂದು ರಾತ್ರಿ 9 ಗಂಟೆಯಿಂದ ರಿಯಾದಿನ ಸುಲೈ ರಸ್ತೆಯಲ್ಲಿರುವ ತಕ್ಆತ್ ವ್ಯೂ ರೆಸಾರ್ಟ್ ನಲ್ಲಿ ನಡೆಯಲಿದೆ ಎಂಧು ಸಂಘಟಕರು ತಿಳಿಸಿದ್ದಾರೆ.
ದಕ್ಷಿಣ ಕರ್ನಾಟಕ ಮೂಲದ ಅನಿವಾಸಿಗಳನ್ನು ಒಂದೇ ಸೂರಿನಲ್ಲಿ ಸಂಘಟಿಸುವ ಉದ್ದೇಶದ ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ, ಕಲೆ ಮತ್ತು ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕುಟುಂಬದ ಆಧಾರಸ್ಥಂಭವಾಗಿರುವ ಅನಿವಾಸಿ ಭಾರತೀಯರ ಹಠಾತ್ ಮರಣದ ಸಂಧರ್ಭ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸ್ಥಾಪನೆಯಾದ ಡಿಕೆಎಂಒ ಸಂಸ್ಥೆ ಈ ಹಿಂದೆ ದಕ್ಷಿಣ ಕರ್ನಾಟಕದಾದ್ಯಂತ ಒಟ್ಟು 12 ಸದಸ್ಯರ ಕುಟುಂಬಕ್ಕೆ ಪರಿಹಾರ ನಿಧಿ ನೀಡಿದೆ. ಮುಖ್ಯವಾಗಿ ಅನಿವಾಸಿ ಭಾರತೀಯರು ಸೌದಿ ಅರೇಬಿಯಾದಲ್ಲಿ ಮತ್ತು ಸ್ವದೇಶದಲ್ಲಿ ಸಂಕಷ್ಟಕ್ಕೊಳಗಾದಾಗ ಸಹಕಾರ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಪ್ರಸ್ತುತ, 1000+ ದಕ್ಷಿಣ ಕರ್ನಾಟಕ ಮೂಲದ ಅನಿವಾಸಿ ಸದಸ್ಯನ್ನು ಹೊಂದಿದೆ.
ಆರಂಭದಲ್ಲಿ, ಡಿಕೆಎಂಒ ಕುಟುಂಬ ಪರಿಹಾರ ನಿಧಿ (ಫ್ಯಾಮಿಲಿ ರಿಲೀಫ್ ಫಂಡ್) ಯೋಜನೆಯ ಮೂಲಕ ಮರಣ ಹೊಂದಿದ ಅನಿವಾಸಿ ಭಾರತೀಯರ ಕುಟುಂಬವನ್ನು ಬೆಂಬಲಿಸುವ ಕಾರ್ಯಸೂಚಿಯೊಂದನ್ನು ರಚಿಸಲಾಗಿದೆ, ಈಗ ಸಂಸ್ಥೆಯು ಸದಸ್ಯರಿಗೆ ಅಗತ್ಯವಾದ ಹಣಕಾಸಿನ ಸಾಲ, ಸಂಕಷ್ಟದಲ್ಲಿದ್ದು ಊರಿಗೆ ತೆರಳುವವರಿಗೆ ವಿಮಾನ ಪ್ರಯಾಣ ಟಿಕೆಟ್, ಸಾಮಾನ್ಯ ಪರಿಹಾರ ನಿಧಿ, ಸ್ವದೇಶದಲ್ಲಿ ಸ್ವಯಂ ಉದ್ಯೋಗ ವನ್ನು ಕಂಡುಕೊಳ್ಳಲು ಮೈಕ್ರೋ ಸಾಲ, ವರದಕ್ಷಿಣೆ ವಿರೋಧಿ ಅಭಿಯಾನ ಮುಂತಾದ ಯೋಜನೆಗಳನ್ನು ನಡೆಸುತ್ತಿದೆ. ದ.ಕ ಜಿಲ್ಲೆಯಲ್ಲಿ ಅರೋಗ್ಯ ಮತ್ತು ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಅನುಭವಿ ಸಂಯೋಜಕರನ್ನು ನೇಮಿಸಿದೆ ಎಂದು ಡಿಕೆಎಂಒ ಅಧ್ಯಕ್ಷ ಅಬ್ದುಲ್ ಅಝೀಝ್ ಬಜ್ಪೆ ಮತ್ತು ಕಾರ್ಯದರ್ಶಿ ಆಸೀಫ್ ಕಣ್ಣೂರ್ ತಿಳಿಸಿದ್ದಾರೆ.







