ಭಟ್ಕಳ: ಯುವ ಸಮುದಾಯ ರಕ್ತದಾನ ಮಾಡಲು ಮುಂದೆ ಬರಬೇಕು-ಸಾಜಿದ ಮುಲ್ಲಾ

ಭಟ್ಕಳ: ರಕ್ತದಾನ ಒಂದು ಶ್ರೇಷ್ಟ ದಾನವಾಗಿದ್ದು ದೇಹದಲ್ಲಿ ಶಕ್ತಿ ಇರುವವರು, ರಕ್ತದಾನ ಮಾಡಲು ಅರ್ಹರಾದವರು ಎಲ್ಲರೂ ಕೂಡಾ ರಕ್ತದಾನ ಮಾಡಬಹುದು ಎಂದು ಉಪ ವಿಬಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಅವರು ಹೇಳಿದರು.
ಅವರು ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಭಟ್ಕಳದ ಸಾಂಸ್ಕೃತಿಕ, ಕ್ರೀಡಾ, ಐಕ್ಯೂಎಸಿ, ಯುವ ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ಅಡಿಯಲ್ಲಿ ಎರ್ಪಡಿಸಲಾಗಿದ್ದ ವಿವಿಧ ಘಟಕಗಳ ಚಟುವಟಿಕೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಯುವಕರು ಕಾಲೇಜು ದಿನಗಳಲ್ಲಿ ರಕ್ತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಅವರಲ್ಲಿ ಶಕ್ತಿಯಿರುತ್ತದೆ, ನಂತರ ಆಯುಷ್ಯ ಕಡಿಮೆಯಾ ಗುತ್ತಾ ಹೋದಂತೆಲ್ಲಾ ಶಕ್ತಿ ಕುಂದುತ್ತದೆ ಎಂದು ಕಿವಿ ಮಾತು ಹೇಳಿದ ಅವರು ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಎರ್ಪಡಿಸುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ರಕ್ತ ನೀಡುವುದರಿಂದ ಹೊಸ ರಕ್ತ ಉತ್ಪನ್ನವಾಗಲು ಸಹಕಾರಿ ಎಂದರು. ವಿದ್ಯಾರ್ಥಿ ಜೀವನ ಒಂದು ಮಹತ್ವದ ಘಟ್ಟವಾಗಿದ್ದು ನಂತರ ನೀವು ಸಮಾಜಕ್ಕೆ ಕಾಲಿಟ್ಟಾಗ ಇಲ್ಲನ ಸಂಕಷ್ಟಗಳ ಅರಿವಾಗುವುದು ಎಂದೂ ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು ಪ್ರತಿಯೋರ್ವರೂ ಕೂಡಾ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ, ಹೆಸರು ಸರಿಯಾಗಿದೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
ಉಡುಪಿ ರಕ್ತನಿಧಿಯ ಮುಖ್ಯಸ್ಥೆ ಡಾ.ವೀಣಾ ಅವರು ಮಾತನಾಡಿ ಒಂದು ಯುನಿಟ್ ರಕ್ತ ಹಿಂದೆ ಓರ್ವರಿಗೆ ಮಾತ್ರ ಸಹಾಯಕವಾಗುತ್ತಿದ್ದರೆ ಇಂದು ನಾಲ್ಕು ಜನರಿಗೆ ಸಹಾಯವಾಗುತ್ತಿದೆ. ನಮ್ಮಲ್ಲಿ ಅಗತ್ಯವಿರುವ ಶೇ.70ರಷ್ಟು ರಕ್ತ ಮಾತ್ರ ಪೂರೈಕೆಯಾಗುತ್ತಿದ್ದು ಶೇ.30ರಷ್ಟು ಕೊರತೆ ಇದೆ. ಅನೇಕ ಕ್ಲಿಷ್ಟಕರ ಸಂದರ್ಭದಲ್ಲಿ ಇದು ತೀವ್ರ ತೊಂದರೆಯಾಗುತ್ತಿದ್ದು ಯುವ ಜನರು ರಕ್ತದಾನಕ್ಕೆ ಮುಂದಾಗುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ದಸ್ತಗೀರ್ ಹಳ್ಯಾಳ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜನತಾ ವಿದ್ಯಾಲಯ ಪ್ರಾಂಶುಪಾಲ ಎ.ಬಿ.ರಾಮರಥ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ. ಆರ್. ನಾಯ್ಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿ.ಡಿ.ಸಿ. ಸದಸ್ಯ ಡಾ. ಪಾಂಡುರಂಗ ನಾಯ್ಕ, ತಾಲೂಕಾ ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ ಭಟ್ಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಬಿ.ಜೆ.ಪಿ. ಮಂಡಳ ಅಧ್ಯಕ್ಷ ರಾಜೇಶ ನಾಯ್ಕ, ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ, ಶಾರದಾ ಸೇವಾ ಸಮಿತಿಯ ರಮೇಶ ಖಾರ್ವಿ, ಫ್ರೆಂಡ್ಸ್ ಜಿಮ್‍ನ ವೆಂಕಟೇಶ ನಾಯ್ಕ, ಸಮಾಜ ಸೇವಕ ಮಂಜುನಾಥ ಖಾರ್ವಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಯುವ ರೆಡ್ ಕ್ರಾಸ್ ಸಂಚಾಲಕ ಪ್ರೊ. ನರಸಪ್ಪ ಕೆ.ಸಿ. ಸ್ವಾಗತಿಸಿದರು. ಡಾ. ಭಾಗೀರಥಿ ನಾಯ್ಕ ಕಾಲೇಜಿನ ವಿವಿಧ ಘಟಕಗಳ ಪರಿಚಯ ಮಾಡಿದರು. ಪ್ರೊ. ನೇತ್ರಾವತಿ ನಾಯ್ಕ ಅತಿಥಿಗಳ ಪರಿಚಯ ಮಾಡಿದರು. ಪ್ರೊ. ಪ್ರೇಮಾ ಆಚಾರಿ ನಿರೂಪಿಸಿದರು.







