ಕಾಶ್ಮೀರದ ಯಥಾಸ್ಥಿತಿ ಬದಲಾಗಬಾರದು: ವಿಶ್ವಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ ಚೀನಾ ಪ್ರತಿಪಾದನೆ
ವಿಶ್ವಸಂಸ್ಥೆ, ಸೆ. 28: ವಿಶ್ವಸಂಸ್ಥೆಯ ಮಹಾಸಭೆಯ ವಾರ್ಷಿಕ ಅಧಿವೇಶನದಲ್ಲಿ ಶುಕ್ರವಾರ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿರುವ ಚೀನಾ, ವಿವಾದವನ್ನು ವಿಶ್ವಸಂಸ್ಥೆಯ ಒಡಂಬಡಿಕೆ, ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಶಾಂತಿಯುತವಾಗಿ ಮತ್ತು ಸೂಕ್ತ ರೀತಿಯಲ್ಲಿ ಪರಿಹರಿಸಬೇಕು ಎಂದು ಹೇಳಿದೆ.
ಕಾಶ್ಮೀರದ ‘ಯಥಾಸ್ಥಿತಿ’ಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂಬುದಾಗಿಯೂ ಪಾಕಿಸ್ತಾನದ ಆಪ್ತ ದೇಶವಾಗಿರುವ ಚೀನಾ ಹೇಳಿದೆ.
‘‘ಹಿಂದಿನಿಂದ ಬಗೆಹರಿಯದೇ ಉಳಿದಿರುವ ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಯ ಒಡಂಬಡಿಕೆ, ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಶಾಂತಿಯುತವಾಗಿ ಮತ್ತು ಸರಿಯಾದ ರೀತಿಯಲ್ಲಿ ಪರಿಹರಿಸಬೇಕು’’ ಎಂದು ಚೀನಾ ವಿದೇಶ ಸಚಿವ ವಾಂಗ್ ಯಿ ತನ್ನ ಭಾಷಣದಲ್ಲಿ ಹೇಳಿದರು.
‘‘ಕಾಶ್ಮೀರದ ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಕ್ರಮಗಳನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳಬಾರದು. ವಿವಾದವನ್ನು ಪರಿಣಾಮಕಾರಿಯಾಗಿ ಇತ್ಯರ್ಥಗೊಳ್ಳುತ್ತದೆ ಹಾಗೂ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧದಲ್ಲಿ ಸ್ಥಿರತೆ ಕಾಣಿಸಿಕೊಳ್ಳುತ್ತದೆ ಎಂದು ಎರಡೂ ದೇಶಗಳ ನೆರೆದೇಶವಾಗಿ ಚೀನಾ ಭಾವಿಸುತ್ತದೆ’’ ಎಂದು ವಾಂಗ್ ಹೇಳಿದರು.
► ಚೀನಾ ಭಾರತದ ಸಾರ್ವಭೌಮತೆಯನ್ನು ಗೌರವಿಸಬೇಕು: ಭಾರತ
‘‘ಚೀನಾ ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದೆ’’ ಎಂದು ಭಾರತ ಸರಕಾರ ಶನಿವಾರ ಹೇಳಿದೆ.
ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಚೀನಾದ ವಿದೇಶ ಸಚಿವ ವಾಂಗ್ ಯಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿರುವುದಕ್ಕೆ ಭಾರತದ ವಿದೇಶ ಸಚಿವಾಲಯದ ವಕ್ತಾರರೊಬ್ಬರು ಹೇಳಿಕೆಯೊಂದರಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
‘‘ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಎಂಬ ಕಾನೂನುಬಾಹಿರ ಯೋಜನೆಯ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಯಥಾಸ್ಥಿತಿಯನ್ನು ಬದಲಿಸುವ ಪ್ರಯತ್ನಗಳು ನಡೆದಿವೆ’’ ಎಂದು ಭಾರತ ಹೇಳಿದೆ.
ಪಶ್ಚಿಮ ಚೀನಾದ ಕಶ್ಗರ್ ವಲಯವನ್ನು ಪಾಕಿಸ್ತಾನದ ಗ್ವಾಡರ್ ಬಂದರಿನೊಂದಿಗೆ ಸಂಪರ್ಕಿಸುವ 50 ಬಿಲಿಯ ಡಾಲರ್ ವೆಚ್ಚದ 3,000 ಕಿ.ಮೀ. ಉದ್ದದ ರಸ್ತೆಯು ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುತ್ತದೆ. ಈ ರಸ್ತೆಯ ಬಗ್ಗೆ ಭಾರತ ಆರಂಭದಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದೆ.