ಕಪ್ಪು ಕಲ್ಲಿನ ಕೋರೆಗಳಿಗೆ ದಾಳಿ: ಸೊತ್ತು ವಶ

ವಿಟ್ಲ, ಸೆ. 28: ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಪ್ಪು ಕಲ್ಲಿನ ಕೋರೆಗಳಿಗೆ ದಾಳಿ ನಡೆಸಿ ಯಂತ್ರಗಳನ್ನು ವಶಕ್ಕೆ ಪಡೆದ ಘಟನೆ ವರಪಾದೆಯಲ್ಲಿ ನಡೆದಿದೆ.
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವರಪಾದೆ ಭಾಗದಲ್ಲಿ ಕಪ್ಪು ಕಲ್ಲಿನ ಗಣಿಗಾರಿಕೆ ನಡೆಸುತ್ತಿರುವುದರಿಂದ ಸಮಸ್ಯೆಯಾಗುವ ಬಗ್ಗೆ ಸ್ಥಳೀಯರೊಬ್ಬರು ಜಿಲ್ಲಾಡಳಿತ ಸೇರಿ ಸಂಭಂದಪಟ್ಟ ಇಲಾಖೆಗಳಿಗೆ ದೂರು ನೀಡಿದ್ದರು.
ಈ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡ ಕೆಲವು ದಿನಗಳ ಹಿಂದೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿತ್ತು. ಆದರೆ, ಆ ಸಮಯದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿರಲಿಲ್ಲ ಎನ್ನಲಾಗಿದೆ. ಕೆಲಸ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ದಾಳಿಯನ್ನು ನಡೆಸಿದ್ದು, ಈ ಸಂದರ್ಭ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ 3 ಹಿಟಾಚಿ, 3 ಟಿಪ್ಪರ್, 1 ಟ್ಯಾಕ್ಟರ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಶುಕ್ರವಾರ ಸಂಜೆ ಸ್ಥಳದಿಂದ ಯಂತ್ರಗಳನ್ನು ವರ್ಗಾವಣೆ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದ ಹಿನ್ನಲೆಯಲ್ಲಿ ಶನಿವಾರವೂ ಕಾರ್ಯಾಚರಣೆ ಮುಂದುವರಿಯಿತು. ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟು ಯಂತ್ರಗಳನ್ನು ರಕ್ಷಣೆ ಮಾಡಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಮೂರ್ತಿ, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್., ಕಂದಾಯ ನಿರೀಕ್ಷಕರಾದ ದಿವಾಕರ ಮುಗುಳಿಯ, ಗ್ರಾಮಕರಣಿಕರಾದ ಪ್ರಕಾಶ್, ವಿಟ್ಲ ಪೊಲೀಸ್ ಠಾಣೆಯ ಎಸ್ಸೈ ಯಲ್ಲಪ್ಪ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದರು.







