ಅಪಘಾತಕ್ಕೀಡಾದ ಗಾಯಾಳುವಿಗೆ ಸ್ಪಂದಿಸಿದ ಸಚಿವ ಶ್ರೀರಾಮುಲು

ಕುಂದಾಪುರ, ಸೆ.28: ಅಪಘಾತಕ್ಕೀಡಾದ ರಿಕ್ಷಾದಲ್ಲಿದ್ದ ಗಾಯಾಳು ಮಹಿಳೆ ಯನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸುವ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಮಾನವೀಯತೆ ಮೆರೆದ ಘಟನೆ ಕುಂಭಾಶಿ ಗಾಯತ್ರಿ ಕಂಪೌಂಡ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕೋಟ ಕಡೆಯಿಂದ ಕುಂಭಾಶಿ ಕಡೆಗೆ ಹೋಗುತ್ತಿದ್ದ ಅಣ್ಣಯ್ಯ ಎಂಬವರ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆ ನಡುವಿನ ಡಿವೈಡರ್ ಮೇಲೆ ಹತ್ತಿ ಪಲ್ಟಿಯಾಯಿತ್ತೆನ್ನಲಾಗಿದೆ. ಇದರಿಂದ ರಿಕ್ಷಾದಲ್ಲಿದ್ದ ಕೊಕ್ಕರ್ಣೆ ಸಮೀಪದ ಮುದ್ದೂರು ಹೊರ್ನಾಳ್ಳಿಯ ತಾರಮತಿ (56) ಹಾಗೂ ದಿವ್ಯಾ(26) ಎಂಬವರು ತೀವ್ರ ವಾಗಿ ಗಾಯಗೊಂಡರು.
ಈ ವೇಳೆ ಅದೇ ದಾರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಉಡುಪಿಯಲ್ಲಿ ಕಾರ್ಯಕ್ರಮ ಮುಗಿಸಿ ಕುಂದಾಪುರ ಸರಕಾರಿ ಆಸ್ಪತ್ರೆಯ ಉದ್ಘಾಟನೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ಅಪಘಾತವನ್ನು ಗಮನಿಸಿದ ಸಚಿವರು ತಕ್ಷಣ ಕಾರನ್ನು ನಿಲ್ಲಿಸಿ ಗಾಯಾಳು ಮಹಿಳೆಯ ಬಳಿ ತೆರಳಿದರು. ಬಳಿಕ ಮಹಿಳೆಯನ್ನು ಎತ್ತಿ ತಮ್ಮೊಂದಿಗೆ ಬಂದ ಕಾರಿನಲ್ಲಿ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಸಚಿವರೊಂದಿಗೆ ಉಡುಪಿ ಶಾಸಕ ರಘುಪತಿ ಭಟ್ ಕೂಡ ಇದ್ದರು.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







