ಕಾಶ್ಮೀರದಲ್ಲಿ ಸಂಪರ್ಕ ನಿರ್ಬಂಧ ತೆರವುಗೊಳಿಸಿ: ಅಮೆರಿಕದ 14 ಸಂಸದರಿಂದ ಮೋದಿಗೆ ಒತ್ತಾಯ

ವಾಶಿಂಗ್ಟನ್, ಸೆ. 28: ಕಾಶ್ಮೀರದಲ್ಲಿನ ಮಾನವಹಕ್ಕು ಪರಿಸ್ಥಿತಿಯ ಬಗ್ಗೆ ಎದ್ದಿರುವ ಕಳವಳವನ್ನು ಬಗೆಹರಿಸುವಂತೆ ಹಾಗೂ ಸಂಪರ್ಕ ನಿರ್ಬಂಧವನ್ನು ತೆಗೆದುಹಾಕುವಂತೆ ಭಾರತೀಯ ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ ಸೇರಿದಂತೆ ಅಮೆರಿಕದ 14 ಸಂಸದರು ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿಯನ್ನು ಉದ್ದೇಶಿಸಿ ಬರೆಯಲಾದ ಪತ್ರಕ್ಕೆ ಸಂಸದರಾದ ಗಿಲ್ಬರ್ಟ್ ಆರ್. ಸಿಸ್ನರಸ್ ಜೂನಿಯರ್, ಜೂಡಿ ಚೂ, ಪ್ರಮೀಳಾ ಜಯಪಾಲ್, ಕ್ಯಾರಲಿನ್ ಮ್ಯಾಲನಿ, ಜೆರಾಲ್ಡ್ ಕಾನಲಿ, ಇಲ್ಹಾನ್ ಉಮರ್, ಬಾರ್ಬರಾ ಲೀ, ಅಲ್ ಗ್ರೀನ್, ರೆ ಲಾಫ್‌ಗ್ರೆನ್, ಆ್ಯಂಡಿ ಲೆವಿನ್, ಮೈಕ್ ಲೆವಿನ್, ಜೇಮ್ಸ್ ಪಿ. ಮೆಕ್‌ಗೋವರ್ನ್, ಜಾನ್ ಶಕೊವ್‌ಸ್ಕಿ ಮತ್ತು ಕ್ಯಾಟೀ ಪೋರ್ಟರ್ ಸಹಿ ಹಾಕಿದ್ದಾರೆ.
‘‘ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ತಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ವಿಫಲರಾಗಿರುವ ದೇಶಾದ್ಯಂತ ಇರುವ ಸಾವಿರಾರು ಕುಟುಂಬಗಳ ಪರವಾಗಿ, ಸಂಪರ್ಕ ನಿರ್ಬಂಧವನ್ನು ತೆಗೆದುಹಾಕುವಂತೆ ಹಾಗೂ ಮಾನವಹಕ್ಕುಗಳಿಗೆ ಸಂಬಂಧಿಸಿದ ಕಳವಳಗಳನ್ನು ಇತ್ಯರ್ಥಪಡಿಸುವಂತೆ ನಾವು ಪ್ರಧಾನಿ ಮೋದಿಯನ್ನು ಒತ್ತಾಯಿಸುತ್ತೇವೆ’’ ಎಂದು ಜಂಟಿ ಹೇಳಿಕೆಯಲ್ಲಿ ಸಂಸದರು ಹೇಳಿದ್ದಾರೆ.





