ವಿಧಿ 370 ರದ್ದು ಪ್ರಶ್ನಿಸಿ ಮನವಿ: ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠದಿಂದ ಅಕ್ಟೋಬರ್ 1ರಿಂದ ಆಲಿಕೆ

ಹೊಸದಿಲ್ಲಿ, ಸೆ. 27: ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಗಳ ಗುಚ್ಛದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಅಕ್ಟೋಬರ್ 1ರಂದು ಆರಂಭಿಸಲಿದೆ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಈ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಷನ್ ಕೌಲ್, ಆರ್. ಸುಭಾಷ್ ರೆಡ್ಡಿ, ಬಿ.ಆರ್. ಗವಾಯಿ ಹಾಗೂ ಸೂರ್ಯಕಾಂತ ಇರಲಿದ್ದಾರೆ. ವಿಧಿ 370 ರದ್ದುಗೊಳಿಸಿರುವುದರ ಸಂವಿಧಾನಿಕ ಮೌಲ್ಯ ಹಾಗೂ ತರುವಾಯ ರಾಷ್ಟ್ರಪತಿ ಅವರು ನೀಡಿರುವ ಆದೇಶದ ಪರಿಶೀಲನೆಗೆ ವಿಚಾರಣೆ ನಡೆಯಲಿದೆ.
ಮನವಿಗಳ ಗುಚ್ಛವನ್ನು ಆಗಸ್ಟ್‌ನಲ್ಲಿ ಸಾಂವಿಧಾನಿಕ ಪೀಠಕ್ಕೆ ಪ್ರಸ್ತಾಪಿಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ, ಅಕ್ಟೋಬರ್ ಮೊದಲ ವಾರದಲ್ಲಿ ಈ ಪ್ರಕರಣದ ವಿಚಾರಣೆಯನ್ನು ವಿಸ್ತೃತ ಪೀಠ ನಡೆಸಲಿದೆ ಎಂದು ಹೇಳಿತ್ತು. ಕೇಂದ್ರ ಸರಕಾರದ ಕಲಂ 370ನ್ನು ರದ್ದುಗೊಳಿಸಿರುವ ಹಾಗೂ ರಾಜ್ಯವನ್ನು ಜಮ್ಮುಕಾಶ್ಮೀರ ಹಾಗೂ ಲಡಾಕ್ ಎಂದು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿರುವ ನಿರ್ಧಾರ ಪ್ರಶ್ನಿಸಿ ಹಲವು ಮನವಿಗಳು ಸಲ್ಲಿಕೆಯಾಗಿದ್ದುವು. ನ್ಯಾಯವಾದಿ ಎಂ.ಎಲ್. ಶರ್ಮಾ ಸಲ್ಲಿಸಿದ ಮೊದಲ ಮನವಿ ಸೇರಿದಂತೆ ನ್ಯಾಷನಲ್ ಕಾನ್ಫರೆನ್ಸ್, ಸಜ್ಜಾದ್ ಲೋನಿ ನೇತೃತ್ವದ ಪೀಪಲ್ಸ್ ಕಾನ್ಫರೆನ್ಸ್ ಹಾಗೂ ಇತರ ಹಲವರು ಮನವಿ ಸಲ್ಲಿಸಿದ್ದರು.
ವಿಧಿ 370ರ ವಿಷಯಗಳ ವಿಚಾರಣೆ ನಡೆಸುವ ಪೀಠದ ಹೊರತಾಗಿ ಸುಪ್ರೀಂ ಕೋರ್ಟ್ ಮರಣ ದಂಡನೆ ವಿಚಾರಣೆ ನಡೆಸಲು ಮೂವರು ಸದಸ್ಯರ ಪೀಠ ಹಾಗೂ ತೆರಿಗೆ ವಿಷಯಗಳ ವಿಚಾರಣೆ ನಡೆಸಲು ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡ ಇತರ ಎರಡು ಪೀಠಗಳನ್ನು ರೂಪಿಸಿದೆ.







