‘ಇ-ಸಿಗರೇಟ್’ ನಿಷೇಧ ಖಂಡಿಸಿ ಪ್ರತಿಭಟನೆ

ಬೆಂಗಳೂರು, ಸೆ. 28: ಏಕಾಏಕಿ ಇ-ಸಿಗರೇಟ್ ಬಳಕೆ, ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ವಿತರಣೆ, ಸಂಗ್ರಹ ಮತ್ತು ಜಾಹೀರಾತುಗಳನ್ನು ನಿಷೇಧಿಸಿರುವುದು ಸರಿಯಲ್ಲ ಎಂದು ‘ಇ-ಸಿಗರೇಟ್ ಬಳಕೆದಾರರನ್ನು ಪ್ರತಿನಿಧಿಸುವ ಅಸೋಸಿಯೇಷನ್ ಆಫ್ ವೇಪರ್ಸ್ ಇಂಡಿಯಾ’ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶನಿವಾರ ಇಲ್ಲಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರಕಾರದ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಇ-ಸಿಗರೇಟ್ ನಿಷೇಧದಿಂದ ವೇಪರ್‌ಗಳು ಮಾರಣಾಂತಿಕ ಧೂಮಪಾನಕ್ಕೆ ಮರಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ 11 ಕೋಟಿ ಧೂಮಪಾನಿಗಳಿಗೆ ಸುರಕ್ಷಿತ ಆಯ್ಕೆಯನ್ನು ನಿರಾಕರಿಸಿದ್ದು, ಈ ಧೂಮಪಾನ ದೇಶದಲ್ಲಿ 11ಮಿಲಿಯನ್ ಜನರನ್ನು ಪ್ರತಿವರ್ಷ ಕೊಲ್ಲುತ್ತಿದೆ. ಸರಕಾರದ ಏಕಪಕ್ಷೀಯ ತೀರ್ಮಾನವು ತಂಬಾಕು ಉದ್ಯಮದ ಹಿತಾಸಕ್ತಿ ಪರವಾಗಿದೆ ಎಂದು ಅವರು ಆರೋಪಿಸಿದರು.
ಕೇಂದ್ರ ಸರಕಾರ ಸಾರ್ವಜನಿಕ ಆರೋಗ್ಯವನ್ನು ನಿರ್ಲಕ್ಷಿಸುತ್ತಿದೆ. ಅಲ್ಲದೆ ಸಿಗರೇಟು ವ್ಯಾಪಾರವನ್ನು ರಕ್ಷಿಸಲು ಮಾನವ ಹಕ್ಕುಗಳ ಹರಣ ಮಾಡುತ್ತಿದೆ. ಏಕೆಂದರೆ ವೇಪಿಂಗ್‌ನಿಂದಾಗಿ ದೇಶದಲ್ಲಿ ಸಿಗರೇಟು ಬಳಕೆ ಪ್ರಮಾಣದಲ್ಲಿ ಐತಿಹಾಸಿಕ ಕುಸಿತ ಕಂಡಿದೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಸಾಮ್ರಾಟ್ ಚೌಧರಿ, ಇ-ಸಿಗರೇಟ್ ಬಳಕೆ, ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ವಿತರಣೆ, ಸಂಗ್ರಹ ನಿಷೇಧವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.







