ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸುತ್ತಮುತ್ತ 40 ಚಿರತೆಗಳು: ವೈಜ್ಞಾನಿಕ ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.28: ರಾಜಧಾನಿಗೆ ಹೊಂದಿಕೊಂಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಅದರ ಸುತ್ತಲ ಅರಣ್ಯ ಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ನಡೆಸಿದ ವೈಜ್ಞಾನಿಕ ಅಧ್ಯಯನದಲ್ಲಿ 40 ಚಿರತೆಗಳನ್ನು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ನೇತೃತ್ವದ ನೇಚರ್ ಕನ್ಸರ್ವೇಷನ್ ಫೌಂಡೇಶನ್ ಗುರುತಿಸಿದೆ.
ರಾಜ್ಯ ಸರಕಾರವು ಅಂತರ್ರಾಷ್ಟ್ರೀಯ ಫಿಲ್ಮ್ಸಿಟಿ ಮಾಡಬೇಕು ಎಂದು ಉದ್ದೇಶಿಸಿರುವ ರೋರಿಚ್ ಎಸ್ಟೇಟ್ ಸೇರಿದಂತೆ ಬನ್ನೇರುಘಟ್ಟ ಹಾಗೂ ಸುತ್ತ ಮುತ್ತಲ ಅರಣ್ಯವನ್ನು ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಬೇಕು ಎಂದು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.
ಮಹಾನಗರಗಳಿಗೆ ಹೊಂದಿಕೊಂಡಿರುವ ಅರಣ್ಯಗಳಲ್ಲಿ ವನ್ಯಜೀವಿ ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲ. ಇದ್ದರೂ ಮಾರ್ಜಾಲ ಗುಂಪಿನ ಚಿರತೆ ಹಾಗೂ ಹುಲಿಯಂತಹ ಜೀವಿಗಳು ಇರುವುದು ವಿಶ್ವದಲ್ಲೇ ಅಪರೂಪ. ಆದರೆ, ಉದ್ಯಾನನಗರಿಯ ಸಮೀಪದ ಈ ಮಹತ್ವದ ರಾಷ್ಟ್ರೀಯ ಉದ್ಯಾನ ಇಷ್ಟೊಂದು ಪ್ರಮಾಣದಲ್ಲಿ ಚಿರತೆಗಳ ಆವಾಸ ತಾಣವನ್ನಾಗಿ ಮಾಡಿಕೊಂಡಿದೆ.
ಇನ್ನು, ಈ ಅರಣ್ಯದಲ್ಲಿ ಸೀಳು ನಾಯಿ, ಆನೆ, ಕಾಟಿ, ಕರಡಿ ಮತ್ತಿತರ ವನ್ಯ ಜೀವಿಗಳು ಇವೆ ಎಂಬುದು ಕಂಡು ಬಂದಿದೆ. ಇಂತಹ ಅಪರೂಪದ ವನ್ಯ ಜೀವಿಗಳನ್ನು ತನ್ನ ಸಮೀಪವೇ ಹೊಂದಿರುವ ವಿಶ್ವದ ಕೆಲವೇ ಮಹಾನಗರಗಳ ಪೈಕಿ ಬೆಂಗಳೂರು ಒಂದು ಎಂಬುದು ಈ ಅಧ್ಯಯನದಿಂದ ಸಾಬೀತಾಗಿದೆ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮಾಹಿತಿ ನೀಡಿದ್ದಾರೆ.
ಚಿರತೆಗಳು ಏಕೆ ಅಧಿಕ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಮಾಂಸಾಹಾರಿ ಚಿರತೆಗಳು ಇರಲು ಪ್ರಮುಖ ಕಾರಣ ಈ ಅರಣ್ಯವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಡವೆ ಮತ್ತು ಸಾರಂಗಗಳಿಗೂ ಆವಾಸತಾಣವಾಗಿರುವುದು. ಸಸ್ಯಾಹಾರಿ ಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಚಿರತೆಗಳು ದೊಡ್ಡ ಪ್ರಮಾಣದಲ್ಲಿ ಈ ಅರಣ್ಯದಲ್ಲಿ ನೆಲೆಸಿವೆ ಎಂದು ಅವರು ಹೇಳುತ್ತಾರೆ.
ಅಧ್ಯಯನದ ಪ್ರಮುಖ ಶಿಫಾರಸು
ಬನ್ನೇರುಘಟ್ಟ ಮತ್ತು ಕಾವೇರಿ ವನ್ಯಜೀವಿಧಾಮದ ಮಧ್ಯೆಯಿರುವ ಕಾರಿಡಾರ್ ಸಂರಕ್ಷಣೆ ಮಾಡಬೇಕು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹೊಸ ಡಾಂಬರು ರಸ್ತೆ ನಿರ್ಮಾಣ ಮಾಡಬಾರದು ಹಾಗೂ ಗುಲ್ಲಳ್ಳಿಗುಡ್ಡ, ಯು.ಎಂ. ಕಾವಲ್, ಬಿ.ಎಂ.ಕಾವಲ್ ಕಾಯ್ದಿಟ್ಟ ಅರಣ್ಯಗಳು, ರೋರಿಚ್ ಎಸ್ಟೇಟ್ ಮತ್ತು ವಿವಿಧ ಭಾಗಗಳ 5,375 ಎಕರೆ ಕಾಡು ಪ್ರದೇಶಗಳನ್ನು ಸಂರಕ್ಷಣಾ ಪ್ರದೇಶವನ್ನಾಗಿ ಘೋಷಣೆ ಮಾಡಬೇಕೆಂಬುದು ಅಧ್ಯಯನದ ಪ್ರಮುಖ ಶಿಫಾರಸುಗಳು.







