ಬಿಡಿ ಸಿಗರೇಟು ಮಾರಾಟಕ್ಕೆ 200 ರೂ.ಗಳ ದಂಡ ?

ಬೆಂಗಳೂರು, ಸೆ.28: ಸಾರ್ವಜನಿಕವಾಗಿ ಬಿಡಿ ಸಿಗರೇಟುಗಳ ಮಾರಾಟವನ್ನು ತಡೆಯಲು ಮುಂದಾಗಿರುವ ಆರೋಗ್ಯ ಇಲಾಖೆ, ಬಹಿರಂಗ ಪ್ರದೇಶಗಳಲ್ಲಿ ಸಿಗರೇಟು ಮಾರಾಟ ಮಾಡುವ ವ್ಯಾಪಾರಿಗಳಿಗೆ ಪ್ರತಿ ವ್ಯಕ್ತಿ ಅಥವಾ ಸಿಗರೇಟ್ ಲೆಕ್ಕದಲ್ಲಿ 200 ರೂ. ದಂಡ ವಿಧಿಸಲು ಇಲಾಖೆ ಮುಂದಾಗಿದೆ.
ತಂಬಾಕು ಉತ್ಪನ್ನಗಳ ಮೇಲೆ ತೀವ್ರ ನಿಗಾ ವಹಿಸಲು ಮುಂದಾಗಿರುವ ಆರೋಗ್ಯ ಇಲಾಖೆ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಇದೀಗ ಬಹಿರಂಗವಾಗಿ ಅಂಗಡಿಗಳಲ್ಲಿ ಸಿಗರೇಟು ಮಾರಾಟಕ್ಕೆ ತಡೆಯಲು ಇಲಾಖೆ ಮುಂದಾಗಿದೆ. ಬಿಡಿ ವ್ಯವಹಾರದ ಮೇಲೆ ನಿಗಾವಹಿಸಲು ಶಿಕ್ಷಣ, ವಾಣಿಜ್ಯ, ಪೊಲೀಸ್, ಅಬಕಾರಿ, ನಗರ ಸ್ಥಳೀಯ ಸಂಸ್ಥೆ ಒಳಗೊಂಡ ತಂಡ ರಚಿಸಲಾಗಿದೆ.
ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನ ಕಾಯ್ದೆಯಡಿ ದಂಡದ ಪ್ರಮಾಣ ಹೆಚ್ಚಿಸುವ ಸಂಬಂಧ ಆರೋಗ್ಯ ಇಲಾಖೆಯಿಂದ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ದಂಡ ಪ್ರಮಾಣ 200 ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸಲು ಚಿಂತನೆ ನಡೆದಿದೆ.
ವಯೋಮಿತಿ ಹೆಚ್ಚಳ: ಪ್ರಸ್ತುತ ಕಾಯ್ದೆಯಡಿ 18 ವರ್ಷಕ್ಕಿಂತ ಮೇಲ್ಪಟ್ಟವರು ತಂಬಾಕು ಸೇವನೆ ಮಾಡಲು ಅವಕಾಶವಿದೆ. ಆದರೆ, ಇದೀಗ ಈ ಕಾಯ್ದೆಯನ್ನು ಬದಲಿಸಿ ವಯೋಮಿತಿಯನ್ನು 21 ವರ್ಷದವರೆಗೂ ಹೆಚ್ಚಳ ಮಾಡಲು ಇಲಾಖೆ ಮುಂದಾಗಿದೆ. ಅನಂತರ ಈ ವಯಸ್ಸಿನ ಒಳಗಿವರಿಗೆ ಸಿಗರೇಟು ಮಾರಾಟ ಮಾಡುವುದು ಅಪರಾಧವಾಗಲಿದೆ.
ಲೈಸೆನ್ಸ್ ಕಡ್ಡಾಯ: ಅಂಗಡಿ-ಮುಂಗಟ್ಟುಗಳಿಗೆ ಇದ್ದಂತೆಯೇ ತಂಬಾಕು ಉತ್ನನ್ನ ಮಾರಾಟಗಾರರಿಗೂ ಲೈಸೆನ್ಸ್ ಕಡ್ಡಾಯಗೊಳಿಸುವಂತೆ ಆರೋಗ್ಯ ಇಲಾಖೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದು ಹೇಳಲಾಗುತ್ತದೆ.
ಕಾಯ್ದೆ ಅನುಷ್ಠಾನ: ಕೊಟ್ಪಾಕಾಯ್ದೆ ಕಟ್ಟುನಿಟ್ಟಿನ ಜಾರಿಗೆ ತರುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಈಗಾಗಲೇ ತಂಡ ರಚಿಸಿದ್ದು, ಕಾರ್ಯ ಪ್ರವೃತ್ತವಾಗಿವೆ. ಅದೇ ರೀತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾಯ್ದೆ ಜಾರಿಗೆ ಪಿಡಿಒ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಉಡುಪಿ ಜಿಲ್ಲೆ ಪಿಡಿಒಗಳಿಗೆ ತರಬೇತಿ ನೀಡಲಾಗಿದೆ.
ತಂಬಾಕು ಕೋಶ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊಟ್ಪಾಕಾಯ್ದೆ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು 2 ತಂಬಾಕು ಕೋಶ ರಚನೆಗೆ ಸರಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಅದರಲ್ಲಿ ಒಬ್ಬ ಜಿಲ್ಲಾ ಸಂಯೊಜಕ, ಒಬ್ಬ ಆಪ್ತ ಸಮಾಲೋಚಕ, ಒಬ್ಬ ಸಾಮಾಜಿಕ ಕಾರ್ಯಕರ್ತರಿದ್ದು ವೈದ್ಯರ ಜತೆ ಕೆಲಸ ನಿರ್ವಹಿಸುತ್ತಾರೆ.







