ವೈಚಾರಿಕತೆ ಬೆಳೆಸಿ, ಪ್ರಕೃತಿಯೊಂದಿಗೆ ಸಂವಾದಿಸಿ: ಕುಂಡಂತಾಯ

ಕಾಪು, ಸೆ.29: ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ವಿದ್ಯಾರ್ಥಿಗಳು ಇಂದು ಸಂಬಂಧಗಳಿಂದ ದೂರ ವಾಗುತ್ತಿ ದ್ದಾರೆ. ಮನೆಯೊಳಗಿದ್ದು ಇಲ್ಲದಂತಿರುವುದರಿಂದ ಕೌಟುಂಬಿಕ ಸಂಬಂಧಗಳು ಕಳಚುತ್ತಿವೆ ಎಂದು ಹಿರಿಯ ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಹೇಳಿದ್ದಾರೆ.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಕಟಪಾಡಿ ಕೆ.ವಿ.ಎಸ್.ಎಂ. ಪದವಿ ಕಾಲೇಜಿನಲ್ಲಿ ಆಯೋಜಿಸಲಾದ ವಿದ್ಯಾರ್ಥಿ ಗಳೆಡೆಗೆ ಸಾಹಿತಿಗಳ ನಡಿಗೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು.
ಸಮಾಜದೊಂದಿಗೆ ಒಳಗೊಳ್ಳದೆ ಏಕಾಂಗಿತನ ಬೆಳೆಸಿಕೊಂಡರೆ ಮುಂದೆ ಸಮಾಜವೇ ತಿರಸ್ಕರಿಸುವ ಅಪಾಯವಿದೆ. ಹಾಗಾದರೆ ಸಮಾಜದಲ್ಲಿ ಬದುಕಲು ಕಷ್ಟವಾಗುವ ದಿನಗಳು ದೂರವಿಲ್ಲ. ಇದರಿಂದ ಹೊರಬಂದು ವೈಚಾರಿಕತೆ ಯನ್ನು ಬೆಳೆಸಿಕೊಂಡು, ಪ್ರಕೃತಿಯೊಂದಿಗೆ ಸಂವಾದಿಸುವ ಕೆಲಸವನ್ನು ಯುವ ಸಮುದಾಯ ಮಾಡಬೇಕು ಎಂದರು.
ಸಾಂಸ್ಕ್ರತಿಕ ಪರಂಪರೆ ಉಳಿಯ ಬೇಕಾದರೆ ಸಾಹಿತ್ಯದ ಮೂಲಕ ವಿದ್ಯಾರ್ಥಿ ಗಳನ್ನು ಸ್ಪರ್ಶಿಸುವ ಕಾರ್ಯ ನಿರಂತರವಾಗಿ ನಡೆಯುವುದು ಅಗತ್ಯವಾಗಿದೆ. ಕೃಷಿ ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ತುಳುನಾಡಿನ ಭವ್ಯಪರಂಪರೆ ನಾಗಾರಾಧನೆ, ದೀಪಾವಳಿ, ಇತರ ಹಬ್ಬಗಳು ರೂಢಿಯಲ್ಲಿ ಬಂದಿವೆ. ಕೃಷಿ ಸಂಸ್ಕೃತಿ ನಾಶವಾದರೆ ಈ ಹಬ್ಬಗಳನ್ನು ಆಚರಿಸುವುದರಲ್ಲಿ ಅರ್ಥವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಸಂಚಾಲಕ ಕೆ.ಸತ್ಯೇಂದ್ರ ಪೈ ಮಾತನಾಡಿ, ಆಂಗ್ಲ ಭಾಷಾ ಪ್ರಭಾವದಿಂದ ಸ್ಥಳೀಯ ಭಾಷೆಗಳು ಸೊರಗು ತ್ತಿದ್ದು, ಈ ನಿಟ್ಟಿನಲ್ಲಿ ಆಂಗ್ಲ ಭಾಷೆಯ ಜೊತೆಯಲ್ಲಿಯೇ ನಮ್ಮ ಮಾತೃಭಾಷೆ ಹಾಗೂ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ತಾಲೂಕು ಕಸಾಪ ಅಧ್ಯಕ್ಷ ನಾರಾಯಣ ಮಡಿ, ಕಾಲೇಜಿನ ಪ್ರಾಂಶುಪಾಲೆ ಸತ್ಯರಂಜನಿ ಶುಭಾಶಂಸನೆ ಗೈದರು. ಕಸಾಪ ಸಮಿತಿ ಸದಸ್ಯ ಹರೀಶ್ ಕಟಪಾಡಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಸಮಿತಿ ಸದಸ್ಯ ಶಿವಾನಂದ ಕಾಮತ್ ಶಿರ್ವ, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ವಿದ್ಯಾ ಅಮ್ಮಣ್ಣಾಯ ಉಪಸ್ಥಿತರಿದ್ದರು.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಕೃಷ್ಣಕುಮಾರ್ ಮಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







