ಉನ್ನಾವೊ ಅತ್ಯಾಚಾರ ಪ್ರಕರಣ: ನ್ಯಾಯಾಲಯ ‘ಐಫೋನ್’ ಕಂಪೆನಿಗೆ ನೀಡಿದ ಸೂಚನೆಯೇನು ಗೊತ್ತಾ?

ಹೊಸದಿಲ್ಲಿ, ಸೆ.29: ಉತ್ತರ ಪ್ರದೇಶದ ಉನ್ನಾವೊದ 17 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಘಟನೆ ನಡೆದ ದಿನ ಯಾವ ಸ್ಥಳದಲ್ಲಿದ್ದರು ಎಂಬ ಬಗ್ಗೆ ವಿವರ ನೀಡುವಂತೆ ಬಹುರಾಷ್ಟ್ರೀಯ ಕಂಪನಿಯಾದ ಆ್ಯಪಲ್ ಇನ್ ಕಾರ್ಪೊರೇಷನ್ ಗೆ ದಿಲ್ಲಿ ನ್ಯಾಯಾಲಯ ಸೂಚಿಸಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರು, ಐ-ಫೋನ್ ಕಂಪನಿ ಆ್ಯಪಲ್ ಗೆ ಅಕ್ಟೋಬರ್ 9ನೇ ತಾರೀಕಿನೊಳಗೆ ನಿಗದಿತ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ಇದಕ್ಕೂ ಮುನ್ನ ಆ್ಯಪಲ್, ಈ ಮಾಹಿತಿ ನೀಡಲು ಎರಡು ವಾರಗಳ ಕಾಲಾವಕಾಶ ನೀಡುವಂತೆ ಕೋರಿತ್ತು.
ಆ್ಯಪಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವಕೀಲ ನ್ಯಾಯಾಲಯದ ಮುಂದೆ ಹಾಜರಾಗಿ, ಆ ದಿನದ ದತ್ತಾಂಶಗಳನ್ನು ದಾಸ್ತಾನು ಮಾಡಿ ಇಡಲಾಗಿದೆಯೇ ಎಂದು ಪರಿಶೀಲಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು. ಆ ಮಾಹಿತಿ ಲಭ್ಯವಿದ್ದಲ್ಲಿ ಯಾವ ವಿಧಾನದಲ್ಲಿ ಅದನ್ನು ನ್ಯಾಯಾಲಯಕ್ಕೆ ನೀಡಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಅಗತ್ಯ ದತ್ತಾಂಶಗಳನ್ನು ಅಫಿಡವಿಟ್ ಮತ್ತು ವಿಶ್ಲೇಷಕರ ಪ್ರಮಾಣಪತ್ರದ ಜತೆಗೆ ಅಥವಾ ಕಂಪನಿಯ ಅಧಿಕೃತ ಅಧಿಕಾರಿಯ ಪ್ರಮಾಣಪತ್ರದ ಜತೆಗೆ ಸಲ್ಲಿಸಬೇಕು ಎಂದು ಸೂಚಿಸಿದರು. 2017ರಲ್ಲಿ ಅಪ್ರಾಪ್ತ ವಯಸ್ಸಿನಲ್ಲಿದ್ದಾಗ ನನ್ನ ಮೇಲೆ ಸೆಂಗಾರ್ ಅತ್ಯಾಚಾರ ಎಸಗಿದ್ದರು ಎಂದು ಯುವತಿ ಆಪಾದಿಸಿದ್ದಳು.







