ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಆರಂಭ

ಮಂಗಳೂರು, ಸೆ. 29: ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಇಂದಿನಿಂದ ಅ.9ರವರೆಗೆ ನಡೆಯಲಿರುವ ನವರಾತ್ರಿ ದಸರಾ ಉತ್ಸವಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷ ದೀಪ ಬೆಳಗಿಸಿ ಚಾಲನೆ ನೀಡಿ ನವರಾತ್ರಿಯ ಸಂದರ್ಭದಲ್ಲಿ ನಾಡಿನ ಮತ್ತು ಜಿಲ್ಲೆಯ ಜನತೆಗೆ ಸುಖ ಶಾಂತಿ ನೆಮ್ಮದಿ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕ್ಷೇತ್ರದಲ್ಲಿ ಗುರು ಪ್ರಾಥನೆ, ಪುಣ್ಯ ಹೋಮ, ನವಕಲಶಾಭಿಷೇಕ ಕಲಶಪ್ರತಿಷ್ಠೆ ಯೊಂದಿಗೆ ಶ್ರೀ ಗಣೇಶ, ಶಾರದಾ ಮಾತೆ ಯೊಂದಿಗೆ ನವದುರ್ಗೆಯರಾದ ಕಾತ್ಯಾಯಿನಿ, ಸ್ಕಂದ ಮಾತಾ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮ ಚಾರಿಣಿ, ಚಂದ್ರಘಟ, ಕೂಷ್ಮಾಂಡಾ, ಸಿದ್ಧಿದಾತ್ರಿ, ಮಹಾಗೌರಿ, ಮಹಾಕಾಳಿಯರ ವಿಗ್ರಹಗಳ ಪ್ರತಿಷ್ಠಾಪನೆಯೊಂದಿಗೆ ನವರಾತ್ರಿ ಉತ್ಸವಕ್ಕೆ ಕುದ್ರೋಳಿಯಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್ ಪದಾಧಿಕಾರಿಗಳಾದ ಪದ್ಮ ರಾಜ್,ಮಾಧವ ಸುವರ್ಣ ,ಮಹೇಶ್ಚಂದ್ರ,ದೇವೇಂದ್ರ ಪುಜಾರಿ,ರಾಧಾ ಕೃಷ್ಣ , ಬಿ.ಕೆ.ತಾರಾನಾಥ್, ರವಿಶಂಕರ್ ಮಿಜಾರ್, ಮಾಲತಿ ಜನಾರ್ದನ ಪುಜಾರಿ, ಊರ್ಮಿಳಾ ರಮೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.








