ಸಂಘಪರಿವಾರದ ಬೆದರಿಕೆ ಬಳಿಕ ‘ನೋಟ್ ಬ್ಯಾನ್’ ಕುರಿತ ಸಾಕ್ಷ್ಯಚಿತ್ರ ನೋಡಲು ಮುಗಿಬಿದ್ದ ಜನರು!
‘ಒರು ಚಾಯಕ್ಕಡಕ್ಕಾರಂಡೆ ಮನ್ ಕಿ ಬಾತ್’

ತಿರುವನಂತಪುರಂ, ಸೆ.29: ನೋಟು ರದ್ದತಿ ಬಳಿಕ ಚಹಾ ಮಾರುವವರ ಸಮಸ್ಯೆಗಳನ್ನು ಬಿಂಬಿಸುವ ಮಲೆಯಾಳಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ತಡೆಯುವ ಸಂಘಪರಿವಾರದ ಬೆದರಿಕೆ ತಂತ್ರ ಇದೀಗ ತಿರುಗುಬಾಣವಾಗಿದೆ. ಆರಂಭದಲ್ಲಿ ರದ್ದುಪಡಿಸುವ ಯೋಚನೆ ಇದ್ದರೂ, ವಿವಾದದ ಕಾರಣದಿಂದ ಜನರು ಈ ಸಾಕ್ಷ್ಯಚಿತ್ರ ವೀಕ್ಷಿಸಲು ಮುಗಿಬಿದ್ದಿದ್ದಾರೆ.
ಜವಾಹರಲಾಲ್ ನೆಹರೂ ವಿವಿಯ ವಿದ್ಯಾರ್ಥಿಗಳು ಈ ಸಾಕ್ಷ್ಯಚಿತ್ರವನ್ನು ತಮ್ಮ ಕ್ಯಾಂಪಸ್ ನಲ್ಲಿ ಪ್ರದರ್ಶಿಸುವಂತೆ ನಿರ್ಮಾಪಕರನ್ನು ಈಗಾಗಲೇ ಕೋರಿದ್ದಾರೆ. ಹಲವು ಮಂದಿ ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ನಿರ್ಮಾಪಕರಿಗೆ ಮನವಿ ಸಲ್ಲಿಸಿದ್ದಾರೆ.
ಬೆದರಿಕೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 23ರಂದು ಚಿತ್ರದ ಮೊದಲ ಉದ್ದೇಶಿತ ಪ್ರದರ್ಶನವನ್ನು ರದ್ದುಪಡಿಸಲಾಗಿತ್ತು. ಬಳಿಕ ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್ ಆಶ್ರಯದಲ್ಲಿ "ಒರು ಚಾಯಕ್ಕಡಕ್ಕಾರಂಡೆ ಮನ್ ಕಿ ಬಾತ್" ಚಿತ್ರವನ್ನು ಮರುದಿನ ಪ್ರದರ್ಶಿಸಲಾಯಿತು.
“ದೆಹಲಿಯಲ್ಲಿರುವ ಕೇರಳ ಕ್ಲಬ್ ನಲ್ಲಿ ಚಿತ್ರವನ್ನು ಸೋಮವಾರ ಪ್ರದರ್ಶಿಸಲು ಉದ್ದೇಶಿಸಲಾಗಿತ್ತು. ಆದರೆ ಅದು ರದ್ದಾಗುವ ಭೀತಿ ಇದೆ. ವಿಚಿತ್ರವೆಂದರೆ ಈ ಚಿತ್ರವನ್ನು ವಿರೋಧಿಸುವ ಯಾರೂ ಚಿತ್ರ ವೀಕ್ಷಿಸಿಲ್ಲ. ಇದು 75 ವರ್ಷ ವಯಸ್ಸಿನ ಯಹ್ಯಾ ಎಂಬವರ ಜೀವನ ಕಥಾನಕವಾಗಿದ್ದು, ತಮ್ಮ ಜೀವನದಲ್ಲಿ ಎದುರಿಸಿದ ಸಂಕಷ್ಟಗಳನ್ನು ಇದು ಬಣ್ಣಿಸುತ್ತದೆ. ನೋಟು ರದ್ದತಿ ಇವರಿಗೆ ದೊಡ್ಡ ಹೊಡೆತ ನೀಡಿತು” ಎಂದು ಚಿತ್ರ ನಿರ್ಮಾಪಕ ಸಾನು ಕುಮ್ಮಿಲ್ ಹೇಳಿದ್ದಾರೆ.







