ಚಿಕ್ಕಮಗಳೂರು: ಸಂಚಾರಿ ಪೊಲೀಸರಿಂದ ವಾಹನ ಸವಾರನ ಮೇಲೆ ದೌರ್ಜನ್ಯ; ಆರೋಪ
ಘಟನೆಯ ವಿಡಿಯೋ ವೈರಲ್

ಚಿಕ್ಕಮಗಳೂರು, ಸೆ.29: ಸಂಚಾರಿ ಪೊಲೀಸ್ ಸಿಬ್ಬಂದಿಯು ವಾಹನ ಸವಾರರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ ಎನ್ನಲಾಗಿದ್ದು, ಘಟನೆಯ ವಿಡಯೋ ವೈರಲ್ ಆಗಿದೆ.
ರವಿವಾರ ನಗರದ ಆಝಾದ್ ಪಾಕ್ ವೃತ್ತದಿಂದ ಐಜಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೈಕ್ ಒಂದನ್ನು ನಿಲ್ಲಿಸಿದ ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸವಾರನಿಗೆ ದಂಡ ಹಾಕಿದ್ದಾರೆ. ದಂಡ ಪಾವತಿಸಿದ ಬೈಕ್ ಸವಾರ ರಶೀದಿ ಕೇಳಿದ್ದಕ್ಕೆ ಪೇದೆ ಮಂಗಲ್‍ದಾಸ್, ರಶೀದಿ ಕೊಡುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದ್ದು, ಇದರಿಂದ ಕುಪಿತನಾದ ಯುವಕ ರಶೀದಿಗಾಗಿ ಪಟ್ಟು ಹಿಡಿದು ಸಂಚಾರಿ ಪೊಲೀಸರ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ವೇಳೆ ಮಂಗಲ್ ದಾಸ್ ಬೈಕ್ ಸವಾರ ಮೇಲೆ ಎಗರಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಮಂಗಲ್ ದಾಸ್ ಜೊತೆಗಿದ್ದ ಮತ್ತೋರ್ವ ಪೇದೆಯೂ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಚಾರಿ ಪೊಲೀಸರ ಕಾರ್ಯವೈಖರಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಎಸ್ಪಿ ಹರೀಶ್ ಪಾಂಡೆ, ಸಂಚಾರಿ ಪೊಲೀಸರ ಅನುಚಿತ ವರ್ತನೆ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.





