ಫೋನ್ ಸಂಪರ್ಕ ಸ್ಥಗಿತ ಮಾನವಹಕ್ಕು ಉಲ್ಲಂಘನೆಯಲ್ಲ: ಅಮಿತ್ ಶಾ

ಹೊಸದಿಲ್ಲಿ, ಸೆ.29: ಕಾಶ್ಮೀರದಲ್ಲಿ ದೀರ್ಘಾವಧಿಯಿಂದ ಉಳಿದುಕೊಂಡಿರುವ ಸಮಸ್ಯೆಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಕಾರಣ ಎಂದು ಕೇಂದ್ರ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದಾರೆ.
ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆ ವೇದಿಕೆಗೆ ಕೊಂಡೊಯ್ಯಲು ನೆಹರೂ ವೈಯಕ್ತಿಕವಾಗಿ ನಿರ್ಧರಿಸಿದ್ದರು. ಇದು ಹಿಮಾಲಯಕ್ಕಿಂತಲೂ ದೊಡ್ಡ ತಪ್ಪಾಗಿದೆ. ಸರ್ದಾರ್ ಪಟೇಲ್ 630 ಪ್ರಾಂತ್ಯಗಳನ್ನು ದೇಶದೊಂದಿಗೆ ವಿಲೀನಗೊಳಿಸಿದರು. ನೆಹರೂಗೆ ಕೇವಲ ಜಮ್ಮು ಮತ್ತು ಕಾಶ್ಮೀರವನ್ನು ದೇಶದೊಂದಿಗೆ ಸೇರಿಸುವ ಕೆಲಸ ಮಾತ್ರವಿತ್ತು. ಆದರೆ ಅದೂ ಕೂಡಾ ಅವರಿಂದ ಆಗಲಿಲ್ಲ. ಕಡೆಗೆ 2019ರ ಆಗಸ್ಟ್‌ನಲ್ಲಿ ಈ ಕೆಲಸ ನಡೆಯಿತು ಎಂದು ಶಾ ಹೇಳಿದ್ದಾರೆ.
ದಿಲ್ಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಸರಕಾರದ ಕ್ರಮವನ್ನು ಸಮರ್ಥಿಸಿದರು. 1947ರಿಂದಲೂ ಕಾಶ್ಮೀರವು ವಿವಾದಾತ್ಮಕ ಹಾಗೂ ಚರ್ಚಾಸ್ಪದ ವಿಷಯವಾಗಿತ್ತು ಎಂಬುದು ಸರಿ. ಆದರೆ ಕಾಂಗ್ರೆಸ್ ಚರಿತ್ರೆಯನ್ನು ವಿರೂಪಗೊಳಿಸಿ ಜನತೆಯ ಮುಂದಿಟ್ಟಿದೆ. ಚರಿತ್ರೆಯನ್ನು ದಾಖಲಿಸುವ ಅಧಿಕಾರ ತಪ್ಪು ಮಾಡಿದ ವ್ಯಕ್ತಿಗಳ ಕೈಯಲ್ಲಿದ್ದರಿಂದ ವಾಸ್ತವಾಂಶವನ್ನು ಮರೆಮಾಚಲಾಗಿದೆ. ಇದೀಗ ಚರಿತ್ರೆಯನ್ನು ಮರು ದಾಖಲಿಸಿ ಅದನ್ನು ಜನತೆಯ ಮುಂದಿಡುವ ಸಮಯ ಬಂದಿದೆ ಎಂದು ಶಾ ಹೇಳಿದರು.
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಸರಕಾರದ ನಿರ್ಧಾರವನ್ನು ವಿರೋಧಿಸಿದ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳಿಗೆ ಇದಿರೇಟು ನೀಡಿದ ಶಾ, ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಶೇಖ್ ಅಬ್ದುಲ್ಲಾರನ್ನು 11 ವರ್ಷ ಬಂಧನದಲ್ಲಿಡಲಾಗಿತ್ತು. ಆದರೆ ನಾವು ಕೇವಲ 2 ತಿಂಗಳು ಬಂಧನಲ್ಲಿಟ್ಟರೆ ಕೆಲವರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದರು. ಕಾಶ್ಮೀರದಲ್ಲಿ ಅತೀ ಶೀಘ್ರದಲ್ಲಿ ಸಹಜ ಸ್ಥಿತಿ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾಶ್ಮೀರದಲ್ಲಿ ದಿಗ್ಬಂಧವಿದೆ ಎಂದು ಬೊಬ್ಬೆ ಹೊಡೆಯುವ ಜನರ ಬುದ್ಧಿಶಕ್ತಿ ದಿಗ್ಬಂಧನದಲ್ಲಿದೆ ಎಂದು ಹೇಳಿದರು. ಕಾಶ್ಮೀರದ 196 ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಕರ್ಫ್ಯೂ ತೆರವುಗೊಳಿಸಲಾಗಿದೆ. ಕೇವಲ 8 ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಾತ್ರ ನಿಷೇಧಾಜ್ಞೆಯಿದೆ.
ಟೆಲಿಫೋನ್ ಸಂಪರ್ಕ ಸ್ಥಗಿತಗೊಳಿಸಿದರೆ ಅದು ಮಾನವ ಹಕ್ಕು ಉಲ್ಲಂಘನೆಯಾಗುವುದಿಲ್ಲ, ಕಳೆದ ಹಲವು ವರ್ಷಗಳಿಂದ ಈ ರಾಜ್ಯದಲ್ಲಿ 41000 ಜನರನ್ನು ಹತ್ಯೆಗೈದಿರುವುದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿದರು.







