ಉಗ್ರನೆಂಬ ಶಂಕೆಯಲ್ಲಿ ಬಂಧಿಸಿದ ವ್ಯಕ್ತಿ ವಾಹನ ಚಾಲಕ: ಪೊಲೀಸರ ಸ್ಪಷ್ಟನೆ

ಸಾಂದರ್ಭಿಕ ಚಿತ್ರ
ಚಂಡೀಗಢ, ಸೆ.29: ಶನಿವಾರ ಜೈಷೆ ಮುಹಮ್ಮದ್ ಸಂಘಟನೆಯ ಉಗ್ರನೆಂಬ ಶಂಕೆಯಲ್ಲಿ ಬಂಧಿಸಿರುವ ವ್ಯಕ್ತಿ ಜಮ್ಮು ಮತ್ತು ಕಾಶ್ಮೀರದ ವಾಹನ ಚಾಲಕ ಎಂದು ಅಂಬಾಲಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ತನ್ನ ಲಾರಿಯಲ್ಲಿ ಸೇಬುಗಳನ್ನು ದಿಲ್ಲಿಯತ್ತ ಸಾಗಿಸುತ್ತಿದ್ದ ಮೆಹ್ರೂಬ್ ಅಹ್ಮದ್ ಎಂಬಾತನನ್ನು ಸೇನೆಯ ಗುಪ್ತಚರ ಅಧಿಕಾರಿಗಳ ತಂಡ ಹಾಗೂ ಪಂಜಾಬ್ ಪೊಲೀಸರ ತಂಡ ಬೆನ್ನಟ್ಟಿ ಬಂಧಿಸಿತ್ತು. ಶಂಕಿತ ಜೆಇಎಂ ಉಗ್ರನೊಬ್ಬ ಸೇಬು ತುಂಬಿದ ಲಾರಿಯನ್ನು ಚಲಾಯಿಸಿಕೊಂಡು ದಿಲ್ಲಿಯತ್ತ ಮುನ್ನುಗ್ಗುತ್ತಿದ್ದಾನೆ ಎಂದು ಶುಕ್ರವಾರ ಅಂಬಾಲಾ ಪೊಲೀಸರಿಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ದೊರಕಿತ್ತು.
ಅದರಂತೆ ಮೆಹ್ರೂಬ್ ಚಲಾಯಿಸುತ್ತಿದ್ದ ಲಾರಿಯನ್ನು ಅಂಬಾಲಾ ಕಂಟೋನ್ಮೆಂಟ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ಮೆಹ್ರೂಬ್ನನ್ನು ವಶಕ್ಕೆ ಪಡೆಯಲಾಗಿತ್ತು. ಗುರುತು ಚೀಟಿ ತೋರಿಸಲು ಮೆಹ್ರೂಬ್ ವಿಫಲನಾಗಿದ್ದರಿಂದ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತ ವ್ಯಕ್ತಿ ಶಂಕಿತ ಉಗ್ರನಲ್ಲ. ವಾಹನ ಚಾಲಕ ಎಂದು ಅಂಬಾಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಜೊರ್ವಾಲ್ ಸ್ಪಷ್ಟನೆ ನೀಡಿದ್ದಾರೆ.





