ತಾಳ್ಮೆ ಎಂದೂ ಮನುಷ್ಯನ ದೌರ್ಬಲ್ಯ ಅಲ್ಲ: ಕೋಟ ಶ್ರೀನಿವಾಸ ಪೂಜಾರಿ ಪರೋಕ್ಷ ಎಚ್ಚರಿಕೆ
‘ನನಗೆ ಎದುರಾಗಿರುವ ಸಮಸ್ಯೆ ಶಾಶ್ವತ ಎಂದು ತಿಳಿದುಕೊಳ್ಳಬೇಡಿ’

ಉಡುಪಿ, ಸೆ.29: ನಾರಾಯಣ ಗುರು ಹಾದಿಯಾಗಿ ಜನಾರ್ದನ ಪೂಜಾರಿಯವರೆಗೆ ಬಿಲ್ಲವ ಸಮಾಜ ಹಲವು ಸವಾಲುಗಳನ್ನು ಎದುರಿಸಿಕೊಂಡು ಬೆಳೆದು ಬದುಕಿದೆ. ಹಾಗಾಗಿ ನನಗೆ ಸಣ್ಣಪುಟ್ಟ ಸಮಸ್ಯೆಯಾದರೆ ಅದು ಶಾಶ್ವತವೆಂದು ತಿಳಿದುಕೊಳ್ಳುವುದು ಬೇಡ. ಜನರ ಆಶೀರ್ವಾದ ಇದ್ದರೆ ಆ ಸಮಸ್ಯೆಯಿಂದ ಶೀಘ್ರವೇ ಬಚಾವಾಗಿ ಬರುತ್ತೇನೆ. ತಾಳ್ಮೆ ಎಂದೂ ಮನುಷ್ಯನ ದೌರ್ಬಲ್ಯ ಆಗಿರಲು ಸಾಧ್ಯವಿಲ್ಲ ಎಂಬ ಸರಳ ಸತ್ಯವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯ ಮೀನುಗಾರಿಕೆ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೈತಪ್ಪಿರುವ ಬಗ್ಗೆ ಪ್ರಸ್ತಾಪಿಸದೆ ಪರೋಕ್ಷ ಸಂದೇಶ ನೀಡಿದರು.
ರಾಜಕಾರಣ ಎಂಬುದು ಸನ್ಯಾಸಿಗಳ ಸಂಘ ಅಲ್ಲ. ಪ್ರೀತಿಸುವ, ಗೌರವಿಸುವ ಹಾಗೂ ಕಾಲು ಎಳೆಯುವವರು ಇರುವಂತಹ ವ್ಯವಸ್ಥೆಯೇ ರಾಜಕಾರಣ. ಇದು ಸುಖದ ಸುಪತ್ತಿಗೆ ಅಲ್ಲ. ನನಗೆ ರಾಜಕೀಯ ಪಕ್ಷದ ಕಾರ್ಯಕರ್ತ ಆಗಬೇಕೆಂಬ ಆಸಕ್ತಿಯಲ್ಲಿ ರಾಜಕಾರಣಕ್ಕೆ ಬಂದಿದ್ದೇನೆ. ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವ ತಾಕತ್ತು ಇರುವವರು ಮಾತ್ರ ಈ ಕ್ಷೇತ್ರದಲ್ಲಿ ಇರಬೇಕು ಎಂದು ಅವರು ತಿಳಿಸಿದರು.
ಇದ್ದು ಜಯಿಸಬೇಕಾದ ಮತ್ತು ಜಯಿಸಿ ಗೆಲ್ಲಬೇಕಾದ ಕ್ಷೇತ್ರವೇ ರಾಜಕಾರಣ. ಸಮಾಜ ಕಟ್ಟಕಡೆಯ ಸಮುದಾಯದಲ್ಲಿ ಬಂದಿರುವ ನಾವು ವ್ಯವಸ್ಥೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ನಾರಾಯಣಗುರುಗಳ ಕಾಲದಲ್ಲೂ ಸಮಸ್ಯೆಗಳು ಎದುರಾಗಿದ್ದವು ಎಂದು ಅವರು ಹೇಳಿದರು.
ಬಂಗಾರಪ್ಪ ಅನೇಕ ಸಮಸ್ಯೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುಖ್ಯಮಂತ್ರಿಯಾಗಿ ಬಡವರ ಪರ ಉತ್ತಮ ಆಡಳಿತ ನಡೆಸಿದರು. ಅದೇ ರೀತಿ ಕೇಂದ್ರದಲ್ಲಿ ಸಚಿವರಾಗಿದ್ದ ಜನಾರ್ದನ ಪೂಜಾರಿ ಹಲವು ಟೀಕೆಗಳನ್ನು ಮೆಟ್ಟಿ ನಿಂತು ಸಾಲ ಮೇಳ ಯೋಜನೆ ಮೂಲಕ ಅನೇಕ ಜನ ಬಡವರಿಗೆ ಸಾಲ ನೀಡಿದರು ಎಂದು ಅವರು ತಿಳಿಸಿದರು.
ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸ್ಥಾನ ಕೈತಪ್ಪಲು ಉಡುಪಿ ಜಿಲ್ಲೆಯ ಐವರು ಬಿಜೆಪಿ ಶಾಸಕರು ಹೈಕಮಾಂಡಿಗೆ ಪತ್ರ ಬರೆದು ಒತ್ತಡ ಹಾಕಿರುವುದೇ ಕಾರಣ ಎಂಬುದಾಗಿ ಬಿಲ್ಲವ ಸಮುದಾಯದ ವಿವಿಧ ಸಂಘಟನೆಗಳು ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದು ಆರೋಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು.







