'ಬಡವರಿಗಾಗಿ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ'
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂಗಿತ

ಉಡುಪಿ, ಸೆ. 29: ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಲ್ಲಿ ಬೇಕಾದಷ್ಟು ಹಣವಿದ್ದು, ಮುಂದೆ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇವಸ್ಥಾನಗಳಲ್ಲಿಯೇ ಸಾಮಾಹಿಕ ವಿವಾಹಗಳನ್ನು ಆಯೋಜಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಸಂಬಂಧ ರಾಜ್ಯದಲ್ಲಿರುವ ಶ್ರೀಮಂತ ದೇಗುಲ ಗಳ ಮುಖಂಡರು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಬ್ರಹ್ಮಶ್ರೀ ನಾರಾ ಯಣಗುರುಗಳ 165ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಜಿಲ್ಲಾಮಟ್ಟದ ಭಾಷಣ, ಪ್ರಬಂಧ, ರಸಪ್ರಶ್ನೆ ಸರ್ಧೆ ಮತ್ತು ಸನ್ಮಾನ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಂದಿನ ದಿನಗಳಲ್ಲಿ ದೇವಸ್ಥಾನಗಳಲ್ಲಿ ಸಾವಿರ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಮದುವೆಗೆ ಬೇಕಾ ಗುವ ತಾಳಿ, ಬಟ್ಟೆ ಮೊದಲಾದ ವಸ್ತುಗಳನ್ನು ದೇಗುಲಗಳ ವತಿಯಿಂದಲೇ ಒದಗಿಸಲಾಗುವುದು ಎಂದರು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಬಿಲ್ಲವ ಸೇವಾ ಸಂಘದ ಡಿ.ಆರ್. ರಾಜು, ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಗೋಪಾಲ್ ಸಿ.ಬಂಗೇರ, ಪಡುಬಿದ್ರಿ ಬಿಲ್ಲವ ಸೇವಾ ಸಂಘದ ಸುಧೀರ್ ಕುಮಾರ್, ಗಂಗೊಳ್ಳಿ ಬಿಲ್ಲವ ಸೇವಾ ಸಂಘದ ಶಿವಾನಂದ ಪೂಜಾರಿ ಗಂಗೊಳ್ಳಿ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮಾಧವ ಬನ್ನಂಜೆ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ ಉಪಾಧ್ಯಕ್ಷ ಕೃಷ್ಣಪ್ಪಪೂಜಾರಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ವಿಜಯ ಪೂಜಾರಿ, ಸುಂದರ್ ಜೆ.ಕಲ್ಮಾಡಿ, ಗಿರೀಶ್ ಎಂ.ಅಂಚನ್, ಸಂತೋಷ್ ಪೂಜಾರಿ, ಜಯಂತಿ ಪೂಜಾರಿ, ಅಶ್ವಿನಿ ಅರುಣ್ ಪೂಜಾರಿ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಸರಕಾರಿ ವಿಶೇಷ ಅಭಿಯೋಜಕ ವಿಜಯ ವಾಸು ಪೂಜಾರಿ, ಮಹೇಶ್ ಮಲ್ಪೆ, ರಕ್ಷಾ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸ ಲಾಯಿತು. ಎಂ.ಮಹೇಶ್ ಕುಮಾರ್ ಸ್ವಾಗತಿಸಿದರು. ದಯಾನಂದ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.







