ರಾಮಕೃಷ್ಣ ಮಿಷನ್‌ನ ಐದು ವರ್ಷಗಳ ಸ್ವಚ್ಛತಾ ಶ್ರಮದಾನ ಸಮಾರೋಪ
ಕೇಂದ್ರ ಮಾರುಕಟ್ಟೆಯಲ್ಲಿ ಬೃಹತ್ ಆಂದೋಲನ

ಮಂಗಳೂರು, ಸೆ.29: ಕಳೆದ ಐದು ವರ್ಷಗಳಿಂದ ಸಾವಿರಾರು ಸ್ವಚ್ಛತಾ ಶ್ರಮದಾನಗಳ ಮೂಲಕ ‘ಸ್ವಚ್ಛ ಮಂಗಳೂರು’ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಅದ್ವಿತೀಯ ಪಾತ್ರ ವಹಿಸಿದ ರಾಮಕೃಷ್ಣ ಮಿಷನ್‌ನ ಸ್ವಚ್ಛತಾ ಅಭಿಯಾನಗಳ ಸಮಾರೋಪ ರವಿವಾರ ನಡೆಯಿತು. ಸಮಾರೋಪದ ಅಂಗವಾಗಿ 3,500ಕ್ಕೂ ಅಧಿಕ ಸ್ವಯಂ ಸೇವಕರ ಪಾಲುದಾರಿಕೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ನಗರದ ಕೇಂದ್ರ ಮಾರುಕಟ್ಟೆ ವಠಾರದಲ್ಲಿ ನಡೆಯಿತು.
ಕೇಂದ್ರ ಸರಕಾರದ ಮನವಿ ಮೇರೆಗೆ ಕಾರ್ಯಪ್ರವೃತ್ತವಾದ ಮಂಗಳೂರು ರಾಮಕೃಷ್ಣ ಮಿಷನ್, 2015ರ ಫೆ.1ರಿಂದ ಆರಂಭಿಸಿ ಐದು ಹಂತಗಳ ಸ್ವಚ್ಛತಾ ಅಭಿಯಾನಗಳನ್ನು ನಡೆಸಿದೆ. ‘ಸ್ವಚ್ಛ ಮಂಗಳೂರು’ ಪ್ರಧಾನ ಉದ್ದೇಶದೊಂದಿಗೆ ಅವಿಭಜಿತ ದ.ಕ ಜಿಲ್ಲೆಯ ವಿವಿಧೆಡೆಯೂ ಸ್ವಚ್ಛತಾ ಕೈಂಕರ್ಯಗಳನ್ನು ನಡೆಸಿ ಈಗ ಈ ಮಹತ್ಕಾರ್ಯಕ್ಕೆ ಮಂಗಳ ಹಾಡಿದೆ.
ಬೆಳ್ಳಂಬೆಳಗ್ಗೆ ಸಹಸ್ರಾರು ಸ್ವಯಂ ಸೇವಕರು ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಕೇಂದ್ರ ಮಾರುಕಟ್ಟೆ ಪರಿಸರದಲ್ಲಿ ಜಮಾಯಿಸಿದ್ದರು. ಬೆಳಗ್ಗೆ 7:30ರಿಂದ 10 ಗಂಟೆಯವರೆಗೆ ಕೇಂದ್ರ ಮಾರುಕಟ್ಟೆ ಮತ್ತು ಸುತ್ತುಮುತ್ತಲ ಪ್ರದೇಶಗಳಲ್ಲಿ ಶ್ರಮದಾನದಲ್ಲಿ ಪಾಲ್ಗೊಂಡರು. ಮೊದಲೇ ಗುರುತಿಸಿದ್ದ 23 ಸ್ಥಳಗಳಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಹುರುಪಿನ ಶ್ರಮದಾನ ಕಂಡುಬಂತು. 250ಕ್ಕೂ ಅಧಿಕ ಸಂಘ ಸಂಸ್ಥೆಗಳಿಂದ ಜನರು ಆಗಮಿಸಿ ಕೈಜೋಡಿಸಿದರು.
ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿದ ರಾಮಕೃಷ್ಣ ಮಠ ಮತ್ತು ಮಿಷನ್ ಉಪಾಧಕ್ಷ, ಬೇಲೂರು ಮಠದ ಸ್ವಾಮಿ ಗೌತಮಾನಂದ ಜೀ ಮಹರಾಜ್, ದೇಶಕ್ಕಾಗಿ ದುಡಿಯುವವರ ಮೇಲೆ ದೇವರ ಆಶೀರ್ವಾದ ಯಾವಾಗಲೂ ಇರುತ್ತದೆ. ರಾಮಕೃಷ್ಣ ಮಠ ಸ್ವಚ್ಛತೆಯ ವಿಷಯದಲ್ಲಿ ಬೃಹತ್ ಆಂದೋಲನವನ್ನೇ ನಡೆಸಿದೆ. ಸತತ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಸಫಲವಾಗಿದೆ ಎಂದರು.
ಐದು ವರ್ಷಗಳ ಹಿಂದೆ ಆರಂಭಗೊಂಡ ರಾಮಕೃಷ್ಣ ಮಿಷನ್‌ನ ಸ್ವಚ್ಛತಾ ಅಭಿಯಾನದಲ್ಲಿ 250 ತಂಡಗಳಿಂದ 200 ವಾರಗಳ ಶ್ರಮದಾನ, 2,500ಕ್ಕೂ ಅಧಿಕ ಕಾರ್ಯಕ್ರಮಗಳು, 10 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು, 20 ಲಕ್ಷ ಮಾನವ ದಿನ ಸೃಜನೆ, 130 ಶಾಲೆಗಳಲ್ಲಿ 13 ಸಾವಿರ ಸ್ವಚ್ಛತಾ ಸೇನಾನಿಗಳ ಆಯ್ಕೆಯ ಮೂಲಕ ಬೃಹತ್ ಕಾರ್ಯ ಸಾಧನೆ ಮಾಡಲಾಗಿದೆ.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ, ಶಾಸಕ ಡಿ.ವೇದವ್ಯಾಸ ಕಾಮತ್, ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಎಂ.ವೆಂಕಟೇಶ್, ಮಂಗಳೂರು ರಾಮಕೃಷ್ಣ ಮಿಶನ್‌ನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಸ್ವಚ್ಛ ಮಂಗಳೂರು ಅಭಿಯಾನದ ಸಂಯೋಜಕ ಏಕಗಮ್ಯಾನಂದ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ ಕಾರ್ಣಿಕ್, ಮಂಗಳೂರು ಮಹಾ ನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, ಕೆಸಿಸಿಐ ಮಾಜಿ ಸದಸ್ಯ ಅಹ್ಮದ್ ಬಾವ, ಡಾ.ಜೀವರಾಜ್ ಸೊರಕೆ ಮತ್ತಿತರರು ಇದ್ದರು.










