‘ಉಪ ಚುನಾವಣೆಗೆ ‘ಇವಿಎಂ’ ಬೇಡ’: ಬಹುಜನ ಕ್ರಾಂತಿ ಮೋರ್ಚಾ ಜನಾಂದೋಲನ
ಇವಿಎಂ ರಹಸ್ಯ ಬಯಲು ಸಮಾರೋಪ ಸಮಾರಂಭ

ಬೆಂಗಳೂರು, ಸೆ.29: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಸಂದರ್ಭದಲ್ಲಿ ಉಪ ಚುನಾವಣೆಯನ್ನು ವಿದ್ಯುನ್ಮಾನ ಮತಯಂತ್ರದ (ಇವಿಎಂ) ಮೂಲಕ ನಡೆಸುವುದು ಬೇಡ ಎಂದು ಬಹುಜನ ಕ್ರಾಂತಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕುಮಾರ ಕಾಳೆ ಅಭಿಪ್ರಾಯಪಟ್ಟರು.
ರವಿವಾರ ನಗರದ ಬೆನ್ಸನ್ ಟೌನ್‌ನ ಇಂಡಿಯನ್ ಸೋಶಿಯಲ್ ಇನ್ಸ್‌ಟ್ಯೂಟ್ ಸಭಾಂಗಣದಲ್ಲಿ ಬಹುಜನ ಕ್ರಾಂತಿ ಮೋರ್ಚಾ ಆಯೋಜಿಸಿದ್ದ, ವಾಮನ ಮೆಶ್ರಾಮ ನೇತೃತ್ವದಲ್ಲಿ ಇವಿಎಂ ರಹಸ್ಯ ಬಯಲು ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಇವಿಎಂ ಮೇಲೆ ಈಗಾಗಲೇ ಸಾಕಷ್ಟು ಅನುಮಾನಗಳಿವೆ. ಈ ಸಂದರ್ಭದಲ್ಲಿ ಚುನಾವಣೆ ಆಯೋಗವು ಅನುಮಾನಗಳಿಗೆ ಎಡೆ ಮಾಡಿಕೊಡದೆ, ಕರ್ನಾಟಕದಲ್ಲಿ ನಡೆಯುವ ಉಪಚುನಾವಣೆ ಹಾಗೂ ಇತರೆ ರಾಜ್ಯಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಬ್ಯಾಲೆಟ್ ಪೇಪರ್ ಬಳಕೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಇವಿಎಂ ಬದಲು ಮತಪತ್ರಗಳಿಂದ ಚುನಾವಣೆ ನಡೆದಾಗ ಮಾತ್ರ ಜನತಂತ್ರ ಗಟ್ಟಿಯಾಗಲಿದೆ. ಅಮೆರಿಕಾ, ಜಪಾನ್‌ನಂತ ಬಲಿಷ್ಟ ರಾಷ್ಟ್ರಗಳು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ದೂರವಿರಿಸಿ ಬ್ಯಾಲೆಟ್ ಪೇಪರ್‌ಗಳ ಮೂಲಕ ಚುನಾವಣೆ ನಡೆಸುತ್ತಿವೆ. ಜನತಂತ್ರ ಉಳಿಯಬೇಕಾದರೆ ಮತದಾರರ ವಿಶ್ವಾಸ, ನಂಬಿಕೆ ಮುಖ್ಯ ಎಂದು ತಿಳಿಸಿದರು.
ಮತಗಳು ಮೌಲ್ಯವಾದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ವಿಪರ್ಯಾಸವೆಂದರೆ ಇವಿಎಂ ಮೂಲಕ ಮತಗಳನ್ನು ದಿಕ್ಕು ತಪ್ಪಿಸುವ ಕೆಲಸ ಕೋಮುವಾದಿಗಳಿಂದ ನಡೆಯುತ್ತಿ ರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ರಾಷ್ಟ್ರೀಯ ಮುಸ್ಲಿಮ್ ಮೋರ್ಚಾ ರಾಜ್ಯಾಧ್ಯಕ್ಷ ವೌಲಾನ ಶಕೀಲ್ ಅಹ್ಮದ್ ಖಾಸ್ಮೀ ಸೇರಿದಂತೆ ಪ್ರಮುಖರಿದ್ದರು.







