ಕೇರಳ ಚರ್ಚ್‌ನಲ್ಲಿ ಭದ್ರತೆಯ ನಡುವೆ ಸಾಂಪ್ರದಾಯಿಕ ಪಾದ್ರಿಯಿಂದ ಪ್ರಾರ್ಥನೆ

ಕೊಚ್ಚಿ,ಸೆ.29: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಆರನೇ ಶತಮಾನದ ಮಲಂಕರ ಸಿರಿಯನ್ ಕ್ರಿಶ್ಚಿಯನ್ ಚರ್ಚ್‌ನಲ್ಲಿ ರವಿವಾರ ತೀವ್ರ ಭದ್ರತೆಯ ಮಧ್ಯೆ ಸಾಂಪ್ರದಾಯಿಕ ಪಂಗಡಕ್ಕೆ ಸೇರಿದ ಪಾದ್ರಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
ಈ ಹಿಂದೆ ಚರ್ಚ್‌ನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದ್ದ ಜಾಕೊಬ್ ಪಂಗಡದ ಹಿರಿಯ ಪಾದ್ರಿಗಳು ಮತ್ತು ಸದಸ್ಯರು ಚರ್ಚನ್ನು ತೊರೆದ ಮೂರು ದಿನಗಳ ನಂತರ ಈ ಪ್ರಾರ್ಥನೆ ನಡೆದಿದೆ.
ಎರ್ನಾಕುಲಂನ ಪಿರವೊಮ್ ವಲಿಯಪಳ್ಳಿ ಚರ್ಚ್‌ನ ಅಧಿಕಾರವನ್ನು ಸಾಂಪ್ರದಾಯಿಕ ಪಂಗಡಕ್ಕೆ ನೀಡಿ ಸರ್ವೋಚ್ಚ ನ್ಯಾಯಾಲಯ 2017ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಸರಕಾರ ಶ್ರೇಷ್ಟ ನ್ಯಾಯಾಲಯದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಈ ಕುರಿತು ಕೇರಳ ಉಚ್ಚ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿತ್ತು. ಉಚ್ಚ ನ್ಯಾಯಾಲಯದ ಆದೇಶದಂತೆ ಗುರುವಾರ ಪೊಲೀಸರು ಚರ್ಚ್‌ನ ಗೇಟ್‌ಗಳನ್ನು ಮುರಿದಿದ್ದರು. ಈ ಸಂದರ್ಭದಲ್ಲಿ, ತಮ್ಮನ್ನು ಒತ್ತಾಯಪೂರ್ವಕ ಹೊರಹಾಕಿದರೆ ಚರ್ಚ್ ಮುಂದೆ ಹರಿಯುವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಭಟನಾಕಾರರು ಬೆದರಿಕೆ ಹಾಕಿದ್ದರು. ರವಿವಾರ ಚರ್ಚ್ ಸುತ್ತಮುತ್ತ ಮತ್ತು ಪಿರವೊಮ್ ಪಟ್ಟಣದಲ್ಲಿ ಬಿಗು ಭದ್ರತೆ ಏರ್ಪಡಿಸಲಾಗಿದ್ದು ಮೊದಲ ಬಾರಿ ಚರ್ಚ್ ಒಳಗೆ ಪ್ರವೇಶಿಸಿದ ಆರ್ಥಡಾಕ್ಸ್ ಪಂಗಡದ ಪಾದ್ರಿಗಳು ಮತ್ತು ಅನುಯಾಯಿಗಳು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಸಾಂಪ್ರದಾಯಿಕ ಮತ್ತು ಜಾಕೊಬ್ ಪಂಗಡದ ಮಧ್ಯೆ 1912ರಿಂದಲೂ ಶತ್ರುತ್ವವಿದ್ದು ಹಲವು ಬಾರಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಚರ್ಚ್‌ನ ಮೇಲೆ ನಿಯಂತ್ರಣ ಸಾಧಿಸಲು ಎರಡು ಪಂಗಡಗಳು ಬಹಳ ವರ್ಷಗಳಿಂದ ಹೋರಟ ನಡೆಸುತ್ತಲೇ ಬಂದಿವೆ.





