ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ: ಡಿಸೆಂಬರ್‌ನಲ್ಲಿ ನೂತನ ರನ್ ವೇ ಉದ್ಘಾಟನೆ

ಬೆಂಗಳೂರು, ಸೆ.29: ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಈ ವರ್ಷದ ಡಿಸೆಂಬರ್‌ನಿಂದ ಮತ್ತೊಂದು ರನ್ ವೇ ಸೇರ್ಪಡೆಗೊಳ್ಳಲಿದೆ.
2018-19ನೇ ಸಾಲಿನಲ್ಲಿ ಕೆಐಎನಿಂದ 3.33 ಕೋಟಿ ಜನರು ವಿಮಾನಯಾನ ಕೈಗೊಂಡಿದ್ದಾರೆ. 2020-21ರ ವೇಳೆಗೆ ಆ ಸಂಖ್ಯೆ 4 ಕೋಟಿ ದಾಟುವ ನಿರೀಕ್ಷೆ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಒತ್ತಡವನ್ನು ನಿಭಾಯಿಸಲು ಕೆಐಎನಲ್ಲಿ 2ನೇ ಟರ್ಮಿನಲ್ ಮತ್ತು ಹೊಸ ರನ್ ವೇ ನಿರ್ಮಿಸಲಾಗುತ್ತಿದೆ. ಅದರಲ್ಲಿ 2ನೆ ಟರ್ಮಿನಲ್ ಕಾಮಗಾರಿ ಮುಂದಿನ ವರ್ಷದ ಜುಲೈಗೆ ಪೂರ್ತಿಯಾಗಲಿದ್ದು, 2ನೆ ರನ್‌ವೇ ಬಹುತೇಕ ಪೂರ್ಣಗೊಂಡಿದ್ದು, ಡಿಸೆಂಬರ್‌ನಲ್ಲಿ ಸೇವೆಗೆ ಅಣಿಯಾಗಲಿದೆ.
600 ವಿಮಾನಗಳ ಹಾರಾಟ: ಕೆಐಎನಲ್ಲಿ ಪ್ರತಿ ಗಂಟೆಗೆ ಸರಾಸರಿ 30ರಿಂದ 35 ವಿಮಾನಗಳು ಹಾರಾಟ ನಡೆಸುತ್ತವೆ. ಅದರಂತೆ ದಿನವೊಂದಕ್ಕೆ 600 ವಿಮಾನಗಳು ಸೇವೆ ನೀಡುತ್ತಿವೆ. 2018-19ನೇ ಸಾಲಿನಲ್ಲಿ 4 ಲಕ್ಷ ಟನ್ ಸರಕು ಸಾಗಣೆ ಮಾಡಲಾಗಿದೆ. ಹೀಗಾಗಿ ಕೆಐಎನಲ್ಲಿ ಪ್ರತ್ಯೆಕ ರನ್ ವೇ ನಿರ್ಮಾಣದ ಅವಶ್ಯಕತೆಯಿತ್ತು. ಅದರ ಹಿನ್ನೆಲೆಯಲ್ಲಿ ಬಿಐಎಎಲ್ ವಿಮಾನ ನಿಲ್ದಾಣದ ದಕ್ಷಿಣ ಭಾಗದಲ್ಲಿ ಹೊಸದಾಗಿ ರನ್ ವೇ ನಿರ್ಮಿಸಿದೆ.
ಈಗಾಗಲೆ ಪ್ರಾಯೋಗಿಕವಾಗಿ ವಿಮಾನಗಳ ಹಾರಾಟ ನಡೆಸಿ ಪರೀಕ್ಷೆ ನಡೆಸಲಾಗಿದೆ. ಸದ್ಯ ಸಿಗ್ನಲಿಂಗ್ ವ್ಯವಸ್ಥೆ, ಏರ್ ಟ್ರಾಫಿಕ್ ಕಂಟ್ರೊಲರ್ (ಎಟಿಸಿ) ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೆ ನಿರ್ಧರಿಸಿದರಂತೆ ನವೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಡಿಸೆಂಬರ್‌ನಲ್ಲಿ ಉದ್ಘಾಟನೆಯಾಗಲಿದೆ ಎಂದು ಅಂದಾಜಿಸಲಾಗಿದೆ.