‘ಮೋದಿ ರಾಷ್ಟ್ರಪಿತ’ ಎಂಬ ಹೇಳಿಕೆ ವಿರುದ್ಧ ಗುಡುಗಿದ ಮಹಾತ್ಮಾ ಗಾಂಧಿ ಮರಿಮೊಮ್ಮಗ

ತುಷಾರ್ ಗಾಂಧಿ
ಮುಂಬೈ,ಸೆ.29: ಪ್ರಧಾನಿ ಮೋದಿಯನ್ನು ರಾಷ್ಟ್ರಪಿತ ಎಂದು ಸಂಬೋಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಮಹಾತ್ಮಾ ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಮೆರಿಕದ ನಿರ್ಮಾತೃಗಳಲ್ಲಿ ಒಬ್ಬರಾದ ಜಾರ್ಜ್ ವಾಶಿಂಗ್ಟನ್ ಅವರ ಸ್ಥಾನವನ್ನು ಪಡೆದುಕೊಳ್ಳಲು ಬಯಸಿರಬಹುದು ಎಂದು ಗಾಂಧಿ ಕುಟುಕಿದ್ದಾರೆ.
ಮಹಾತ್ಮಾ ಗಾಂಧಿಯ 150ನೇ ಜನ್ಮದಿನಾಚರಣೆಯನ್ನು ಸರಕಾರ ಅದ್ಧೂರಿಯಾಗಿ ನಡೆಸಲು ಮುಂದಾಗಿರುವುದು ಕೇವಲ ತೋರ್ಪಡಿಕೆಯಷ್ಟೇ ಎಂದು ಅವರು ತಿಳಿಸಿದ್ದಾರೆ. ಕಳೆದ ವಾರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಹೊಗಳಿದ್ದ ಟ್ರಂಪ್, “ನನಗೆ ನೆನಪಿರುವಂತೆ ಮೊದಲು ಭಾರತ ಅಸಂಘಟಿತವಾಗಿತ್ತು. ಭಿನ್ನಾಭಿಪ್ರಾಯ, ಹೋರಾಟದಿಂದ ತುಂಬಿತ್ತು. ಆದರೆ ಮೋದಿ ಎಲ್ಲರ ಮಧ್ಯೆ ಒಗ್ಗಟ್ಟು ಮೂಡಿಸಿದರು. ಒಂದು ತಂದೆಯಂತೆ. ಬಹುಶಃ ಅವರು ಭಾರತದ ಪಿತಾಮಹ ಆಗಿದ್ದಾರೆ” ಎಂದು ಅಭಿಪ್ರಾಯಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ತುಷಾರ್ ಗಾಂಧಿ, ಭಾರತದ ಪಿತಾಮಹನನ್ನು ಹೊಸ ವ್ಯಕ್ತಿಯೊಂದಿಗೆ ಬದಲಾಯಿಸುವ ಅಗತ್ಯವಿದೆ ಎಂದು ಭಾವಿಸುವವರು ಹಾಗೆ ಮಾಡಬಹುದು. ಬಹುಶಃ ಟ್ರಂಪ್ ಅಮೆರಿಕ ನಿರ್ಮಾತೃಗಳಲ್ಲಿ ಒಬ್ಬರಾದ ಜಾರ್ಜ್ ವಾಶಿಂಗ್ಟನ್ ಸ್ಥಾನವನ್ನು ಪಡೆದುಕೊಳ್ಳಲೂ ಬಯಸಿರಬಹುದು ಎಂದು ತಿಳಿಸಿದ್ದಾರೆ.