ಅತಿವೃಷ್ಟಿಗೆ ತುತ್ತಾಗಿ ಅಳಿದುಳಿದ ಭತ್ತದ ಗದ್ದೆಗೆ ಬೆಂಕಿ ರೋಗದ ಕಾಟ
ಮಲೆನಾಡಿನ ಭತ್ತದ ಕೃಷಿಕರಿಗೆ ಗಾಯದ ಮೇಲೆ ಬರೆ

ಚಿಕ್ಕಮಗಳೂರು, ಸೆ.29: ಒಂದೆಡೆ ಮಲೆನಾಡಿನ ಭತ್ತದ ಕೃಷಿಕರನ್ನು ಇತ್ತೀಚೆಗೆ ಸುರಿದ ಭಾರೀ ಮಳೆ ಹೈರಾಣಾಗಿಸಿದ್ದು, ಇದೀಗ ಭತ್ತದ ಗದ್ದೆಗಳನ್ನು ಆಪೋಶಕ್ಕೆ ಪಡೆಯುತ್ತಿರುವ ಬೆಂಕಿರೋಗದಿಂದಾಗಿ ಮಲೆನಾಡಿನ ಭತ್ತದ ಕೃಷಿಕರು ತಲೆ ಮೇಲೆ ಕೈಗೊತ್ತು ಕೂರುವಂತಾಗಿದೆ. ಅತಿವೃಷ್ಟಿಯಿಂದ ಹಾಳಾಗಿರುವ ಭತ್ತದ ಗದ್ದೆಗಳಿಗೇ ಇನ್ನೂ ಸರಕಾರ ಪರಿಹಾರ ನೀಡಿಲ್ಲ. ಈಗ ಬೆಂಕಿ ರೋಗದಿಂದ ನಾಶವಾಗುತ್ತಿರುವ ಭತ್ತದ ಗದ್ದೆಗಳಿಗೆ ಸರಕಾರ ಪರಿಹಾರ ನೀಡುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಕೃಷಿಕರಿದ್ದಾರೆ.
ಮಲೆನಾಡಿನಲ್ಲಿ ಇತ್ತೀಚೆಗೆ ಕಂಡುಕೇಳರಿಯದ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಮಲೆನಾಡಿನ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ನೂರಾರು ಎಕರೆ ಕಾಫಿ, ಅಡಿಕೆ, ಭತ್ತದ ಗದ್ದೆಗಳು ನಿರ್ನಾಮವಾಗಿವೆ. ಹಳ್ಳಕೊಳ್ಳಗಳು ತುಂಬಿ ಹರಿದ ಪರಿಣಾಮ ನದಿಗಳಲ್ಲಿ ನೆರೆ ಉಕ್ಕಿ ಹರಿದು ಈ ತಾಲೂಕುಗಳ ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ನಾಟಿ ಮಾಡಿದ್ದ ಭತ್ತದ ಗದ್ದೆಗಳಲ್ಲಿ ಮರಳು, ಹೂಳು ತುಂಬಿಕೊಂಡು ಗದ್ದೆಗಳು ಸಂಪೂರ್ಣವಾಗಿ ನಾಶವಾಗಿದ್ದವು. ಗದ್ದೆಗಳು ನಾಶವಾದ ಕೃಷಿಕರು ಸರಕಾರದ ಪರಿಹಾರಕ್ಕಾಗಿ ಅರ್ಜಿ ಹಾಕಿಕೊಂಡು ಪರಿಹಾರ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಕಾಯುತ್ತಿದ್ದಾರೆಯೇ ಹೊರತು ಸರಕಾರದಿಂದಾಗಲೀ ಅಥವಾ ಜಿಲ್ಲಾಡಳಿತದಿಂದಾಗಲೀ ಇದುವರೆಗೂ ಭತ್ತದ ಕೃಷಿಕರಿಗೆ ನಯಾ ಪೈಸೆಯ ಪರಿಹಾರ ಸಿಗದೆ, ಭತ್ತದ ಗದ್ದೆಗಳನ್ನು ಕಳೆದುಕೊಂಡಿರುವ ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಈ ಮಧ್ಯೆ ಮಲೆನಾಡಿನ ಈ ತಾಲೂಕುಗಳ ವ್ಯಾಪ್ತಿಯಲ್ಲಿ ಅಳಿದುಳಿದಿರುವ ಭತ್ತದ ಗದ್ದೆಗಳು ಇದೀಗ ಹವಾಮಾನ ವೈಫರೀತ್ಯದ ಪರಿಣಾಮದಿಂದಾಗಿ ಸೈನಿಕ ಹುಳುಗಳು ಬಾಧೆ ಬೆಂಕಿರೋಗಗಳು ಭತ್ತದ ಗದ್ದೆಗಳನ್ನು ಆಪೋಶನಕ್ಕೆ ಪಡೆಯುತ್ತಿದ್ದು, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕಿನಾದ್ಯಂತ ಬೆಂಕಿರೋಗದಿಂದಾಗಿ ನೂರಾರು ಎಕರೆ ಪ್ರದೇಶಗಳಲ್ಲಿ ಬೆಳೆಯಲಾಗಿದ್ದ ಭತ್ತದ ಗದ್ದೆಗಳು ಬೆಂಕಿರೋಗದಿಂದಾಗಿ ನಾಶವಾಗುತ್ತಿವೆ. ಈ ಭಾಗದಲ್ಲಿ ಬೆಂಕಿರೋಗದಿಂದ ಭತ್ತದ ಸಸಿಗಳು ಒಣಗಿ ಹೋಗುತ್ತಿದ್ದು, ಭತ್ತದ ಕೃಷಿಕರು ವಿವಿಧ ಕೀಟನಾಶಕ ಔಷಧಗಳನ್ನು ಸಿಂಪಡಿಸುತ್ತಿದ್ದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ರೈತರು ಅಳಲುತೋಡಿಕೊಳ್ಳುತ್ತಿದ್ದಾರೆ.
ಗದ್ದೆಗಳಲ್ಲಿ ಹಸನಾಗಿ ಬೆಳೆದಿರುವ ಭತ್ತದ ಸಸಿಗಳ ಸುಳಿಗಳು ರೋಗಕ್ಕೆ ತುತ್ತಾಗುತ್ತಿದ್ದು, ರೋಗಕ್ಕೆ ತುತ್ತಾದ ಗದ್ದೆಗಳು ಬೆಂಕಿಯಿಂದ ಸುಟ್ಟಂತೆ ಭಾಸವಾಗುತ್ತಿವೆ. ಈ ಹಿಂದೆ ಸಾಂಪ್ರದಾಯಿಕ ಭತ್ತದ ಕೃಷಿಗೆ ಮಲೆನಾಡು ಹೆಸರಾಗಿತ್ತು. ಕ್ರಮೇಣ ಮಲೆನಾಡಿನ ಭತ್ತದ ಗದ್ದೆಗಳು ಕಾಫಿ, ಅಡಿಕೆ, ಕಾಳು ಮೆಣಸಿನಂತಹ ವಾಣಿಜ್ಯ ಬೆಳೆಗಳಿಗೆ ಭಾರೀ ಬೆಲೆ ಬಂದ ಹಿನ್ನೆಲೆಯಲ್ಲಿ ಗದ್ದೆಗಳು ಅಡಿಕೆ, ಕಾಫಿ ತೋಟಗಳಾಗಿ ಪರಿವರ್ತನೆಗೊಂಡಿವೆ. ಮತ್ತೊಂದೆಡೆ ಭತ್ತದ ಬೆಳೆಗೆ ಕಡಿಮೆ ಬೆಲೆಯ ಕಾರಣದಿಂದಾಗಿ ಬೆಳೆ ಬೆಳೆದು ಕೈಸುಟ್ಟುಕೊಳ್ಳುವ ಭೀತಿಯಿಂದಾಗಿ ಭತ್ತದ ಕೃಷಿಕರೂ ಭತ್ತದ ಕೃಷಿಯಿಂದ ವಿಮುಖರಾಗಿದ್ದಾರೆ. ಪರಿಣಾಮ ಸಣ್ಣ, ಅತಿಸಣ್ಣ ಕೃಷಿಕರು ಮಾತ್ರ ಪ್ರಸಕ್ತ ಮಲೆನಾಡಿನಲ್ಲಿ ಭತ್ತ ಬೆಳೆಯುತ್ತಿದ್ದು, ಹೀಗೆ ಬೆಳೆದ ಬೆಳೆ ಬೆಂಕಿರೋಗ, ಸೈನಿಕ ಹುಳುಗಳ ಬಾಧೆಯಿಂದ ನಾಶವಾಗುತ್ತಿದ್ದು, ಭತ್ತವನ್ನೇ ನಂಬಿ ಬದುಕುತ್ತಿದ್ದ ಮಲೆನಾಡಿನ ಬಡ ಭತ್ತದ ಕೃಷಿಕರನ್ನೂ ಆತಂಕಕ್ಕೆ ದೂಡಿದೆ.
ಒಟ್ಟಾರೆ ಅತಿವೃಷ್ಟಿಯಿಂದ ಕಂಗೆಟ್ಟಿದ್ದ ಮಲೆನಾಡಿನ ಭತ್ತದ ಕೃಷಿಕರು ಅಳಿದುಳಿದಿರುವ ಭತ್ತದ ಬೆಳೆಯಾದರೂ ಕೈಗೆ ಸಿಗಲಿ ಎಂದುಕೊಂಡು ಅರೈಕೆ ಮಾಡುತ್ತಿದ್ದ ಭತ್ತದ ಬೆಳೆ ವಿವಿಧ ರೋಗಗಳಿಗೆ ಬಲಿಯಾಗುತ್ತಿದೆ. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಕೂಡಲೇ ಕೀಟಬಾಧೆಯಿಂದ ನಾಶವಾಗುತ್ತಿರುವ ಭತ್ತದ ಕೃಷಿಕರ ನೆರವಿಗೆ ಧಾವಿಸಬೇಕಾಗಿದೆ. ರೋಗಕ್ಕೆ ತುತ್ತಾಗಿರುವ ಗದ್ದೆಗಳಿಗೆ ಸೂಕ್ತ ಪರಿಹಾರವನ್ನು ವಿತರಿಸಬೇಕಾಗಿದೆ ಎಂಬುದು ಮಲೆನಾಡಿನ ಭತ್ತದ ಕೃಷಿಕರ ಮನವಿಯಾಗಿದೆ.
ನಾನು ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು, ತನ್ನ ಹೆಸರಿನಲ್ಲಿ ಎರಡು ಎಕರೆ ಜಮೀನು ಇದೆ. ಈ ಜಮೀನಿನಲ್ಲಿ ಈ ಹಿಂದಿನಿಂದಲೂ ಭತ್ತ ಬೆಳೆಯುತ್ತಿದ್ದೇವೆ. ನನ್ನ ಕುಟುಂಬಕ್ಕೆ ಭತ್ತದ ಕೃಷಿಯೇ ಜೀವನಾಧಾರವಾಗಿದೆ. ಇದೇ ಮೊದಲ ಬಾರಿಗೆ ನನ್ನ ಕುಟುಂಬದ ಜಮೀನಿಗೆ ಬೆಂಕಿ ರೋಗ ತಗಲಿದೆ. ಈಗಾಗಲೇ ಅರ್ಧ ಜಮೀನು ರೋಗದಿಂದ ನಾಶವಾಗಿದೆ. ಉಳಿದ ಜಮೀನಿಗೆ ಕೀಟನಾಶಕ ಸಿಂಪಡಣೆ ಮಾಡಿದ್ದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಅಕ್ಕಪಕ್ಕದ ಭತ್ತದ ಗದ್ದೆಗಳೂ ಬೆಂಕಿರೋಗಕ್ಕೆ ತುತ್ತಾಗಿವೆ. ಸರಕಾರ ರೋಗಕ್ಕೆ ತುತ್ತಾಗಿರುವ ಭತ್ತದ ಗದ್ದೆಗೆ ಪರಿಹಾರ ನೀಡಿದರೆ ತುಂಬಾ ಅನುಕೂಲವಾಗುತ್ತಿತ್ತು.
- ಮಲ್ಲಮ್ಮ ನಾಗಯ್ಯ, ಭತ್ತದ ಗದ್ದೆ ಮಾಲಕರು, ಎತ್ತಿನಹಟ್ಟಿ ಗ್ರಾಮ, ಕೊಪ್ಪ ತಾಲೂಕು







