ಭಾರತದ ಮುಖ್ಯ ಕೋಚ್ ಆಯ್ಕೆ ಮಾಡಿದ್ದ ಸಮಿತಿಗೆ ಹಿತಾಸಕ್ತಿ ಸಂಘರ್ಷ ಆರೋಪ

ಹೊಸದಿಲ್ಲಿ, ಸೆ.29: ಟೀಮ್ ಇಂಡಿಯಾದ ಮುಖ್ಯ ಕೋಚ್ ಆಯ್ಕೆ ಮಾಡಲು ರಚಿಸಲಾಗಿದ್ದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ವಿರುದ್ಧವೂ ಇದೀಗ ಹಿತಾಸಕ್ತಿ ಸಂಘರ್ಷದ ಆರೋಪ ಕೇಳಿ ಬಂದಿದೆ. ರವಿ ಶಾಸ್ತ್ರಿ ಅವರನ್ನು ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ಮರು ನೇಮಕ ಮಾಡಿದ್ದ ಸಮಿತಿ ಬಗ್ಗೆ ಅಪಸ್ವರ ಕೇಳಿ ಬಂದಿದೆ.
ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಸದಸ್ಯರಾಗಿದ್ದರು.
ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯು ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ರವಿ ಶಾಸ್ತ್ರಿ ಅವರನ್ನು ಆಯ್ಕೆ ಮಾಡಿ ಅವರಿಗೆ 2021ರ ಟ್ವೆಂಟಿ-20 ವಿಶ್ವಕಪ್ ವರೆಗೆ ಮುಂದುವರಿಯಲು ಅವಕಾಶ ಮಾಡಿಕೊಟ್ಟಿತ್ತು.
ಲೋಧಾ ಸಮಿತಿಯ ಶಿಫಾರಸಿನ ಅನುಗುಣವಾಗಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆಯನ್ನಷ್ಟೇ ಅಲಂಕರಿಸಲು ಅವಕಾಶ ಇದೆ. ಆದರೆ ಕ್ರಿಕೆಟ್ ಆಡಳಿತ ಸಮಿತಿಯ ಸದಸ್ಯರು ನಿಯಮ ಉಲ್ಲಂಘಿಸಿ ಬಹು ಹುದ್ದೆಗಳನ್ನು ಹೊಂದುವ ಮೂಲಕ ಹಿತಾಸಕ್ತಿ ಸಂಘರ್ಷ ಎದುರಾಗುವಂತೆ ಮಾಡಿದ್ದಾರೆಂದು ಆರೋಪಿಸಿ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಆಜೀವ ಸದಸ್ಯರಾದ ಸಂಜೀವ್ ಗುಪ್ತಾ ದೂರು ದಾಖಲಿಸಿದ್ದಾರೆ.
ದೂರಿನ ವಿಚಾರಣೆ ಕೈಗೊಂಡಿರುವ ಬಿಸಿಸಿಐ ಎಥಿಕ್ಸ್ ಆಫೀಸರ್ ಡಿ.ಕೆ ಜೈನ್ ಈ ಸಂಬಂಧ ಕ್ರಿಕೆಟ್ ಸಲಹಾ ಸಮಿತಿಯ ಮೂವರು ಸದಸ್ಯರುಗಳಿಗೆ ನೋಟೀಸ್ ಜಾರಿಗೊಳಿಸಿ ಅಕ್ಟೋಬರ್ 10ರ ಒಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ.
2014-16ರಲ್ಲಿ ಟೀಮ್ ಇಂಡಿಯಾದ ನಿರ್ದೇಶಕರಾಗಿದ್ದ ರವಿ ಶಾಸ್ತ್ರಿ ಅವರನ್ನು 2017-2019ರ ಅವಧಿಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿತ್ತು.







