ಕೆಆರ್‌ಎಸ್ ಹಿನ್ನೀರಿನಲ್ಲಿ ಸಾಹಸ ಕ್ರೀಡೋತ್ಸವಕ್ಕೆ ಚಾಲನೆ

ಮಂಡ್ಯ, ಸೆ.29: ದಸರಾ ಉತ್ಸವ ಅಂಗವಾಗಿ ಕೃಷ್ಣರಾಜಸಾಗರ(ಕೆಆರ್‌ಎಸ್)ದ ವೇಣುಗೋಪಾಲಸ್ವಾಮಿ ದೇವಾಸ್ಥಾನದ ಬಳಿ ಹಿನ್ನೀರಿನಲ್ಲಿ ಆಯೋಜಿಸಿರುವ ಸಾಹಸ ಕ್ರೀಡೋತ್ಸವಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ರವಿವಾರ ಚಾಲನೆ ನೀಡಿದರು.
ಪ್ರವಾಸೋದ್ಯಮ ಇಲಾಖೆಯು ಖಾಸಗಿ ಕಂಪನಿ ಜತೆ ಆಯೋಜಿಸುರುವ ಈ ಕ್ರೀಡೋತ್ಸವಕ್ಕೆ ಪುಟ್ಟರಾಜು ಹೆಲಿಕಾಫ್ಟರ್, ಬೋಟ್‍ನಲ್ಲಿ ಜಾಯ್‍ರೈಡ್ ಮಾಡಿ ಪ್ರವಾಸಿಗರ ಪ್ರವಾಸಿಗರ ಜತೆ ಸಂತಸ ಹಂಚಿಕೊಂಡರು.
ಮೈಸೂರು ಮತ್ತು ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರು ಹೆಲಿಕಾಫ್ಟರ್ ಜಾಯ್ ರೈಡ್ ಮಾಡಿ ಆಕಾಶದಿಂದ ಕೆಆರ್‍ಎಸ್‍ನ ಉದ್ಯಾನವನ ಮತ್ತಿತರ ಪ್ರದೇಶಗಳ ಸೌಂದರ್ಯ ಸವಿಯಬಹುದು. ಇದಕ್ಕೆ 2,600 ರೂ. ದರ ನಿಗದಿ ಮಾಡಲಾಗಿದೆ. ಇದಲ್ಲದೆ ಕೆಆರ್‍ಎಸ್‍ನ ಹಿನ್ನೀರಿನಲ್ಲಿ ಬೋಟಿಂಗ್, ತೆಪ್ಪ, ಮೋಟಾರು ಸೈಕಲ್ ಬೋಟಿಂಗ್ ಕ್ರೀಡೆಗಳನ್ನೂ ಆಯೋಜಿಸಲಾಗಿದೆ. ಹಲವರು ಈ ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹರೀಶ್ ಹಾಗು ಇತರೆ ಗಣ್ಯರು ಹಾಜರಿದ್ದರು.






