ಚು.ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಆರೋಪ: ಪ್ರಜ್ವಲ್ ರೇವಣ್ಣಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ

ಬೆಂಗಳೂರು, ಸೆ.30: ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣಗೆ ಆಕ್ಷೇಪಣೆ ಸಲ್ಲಿಸಲು ಅ.18ರವರೆಗೆ ಸಮಯಾವಕಾಶ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ಸೋಮವಾರ ವಿಚಾರಣೆ ನಡೆಯಿತು.
ಚುನಾವಣಾ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಹೈಕೋರ್ಟ್ ನೀಡಿದ್ದ ನೋಟಿಸ್ ಅನ್ನು ಪ್ರಜ್ವಲ್ ರೇವಣ್ಣ ಸ್ವೀಕರಿಸಿರಲಿಲ್ಲ. ಹೀಗಾಗಿ, ನ್ಯಾಯಪೀಠವು ಎರಡು ರಾಜ್ಯ ಪತ್ರಿಕೆಗಳಲ್ಲಿ ಹಾಗೂ ಹಾಸನ ಜಿಲ್ಲೆಯ ಸ್ಥಳೀಯ ದಿನಪತ್ರಿಕೆಗಳಲ್ಲಿ ನೋಟಿಸ್ ಬಗ್ಗೆ ಪ್ರಕಟಿಸಲು ಸೂಚನೆ ನೀಡಿತ್ತು. ಇದಾದ ಬಳಿಕ ಪ್ರಜ್ವಲ್ ಅವರು ತಮ್ಮ ವಕೀಲರ ಮೂಲಕ ನೋಟಿಸ್ ಅನ್ನು ಸ್ವೀಕರಿಸಿದ್ದರು. ಪ್ರಜ್ವಲ್ ಪರ ವಕೀಲ ಕೇಶವರೆಡ್ಡಿ ಅವರು ಈ ನೋಟಿಸ್‌ಗೆ ಸಂಬಂಧಪಟ್ಟಂತೆ ಆಕ್ಷೇಪಣೆ ಸಲ್ಲಿಸಲು 4 ವಾರ ಕಾಲಾವಕಾಶ ನೀಡಬೇಕೆಂದು ಸೋಮವಾರ ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠವು ಅ.18ರವರೆಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಿ, ವಿಚಾರಣೆಯನ್ನು ಮುಂದೂಡಿತು.
ಪ್ರಕರಣದ ಹಿನ್ನೆಲೆ: ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ, ಹಾಸನ ಬಿಜೆಪಿ ಅಭ್ಯರ್ಥಿ ಮತ್ತು ವಕೀಲ ದೇವರಾಜೇಗೌಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಹೈಕೋರ್ಟ್ ಪ್ರಜ್ವಲ್‌ಗೆ ನೋಟಿಸ್ ನೀಡಿತ್ತು. ಆದರೆ, ಮೂರು ಬಾರಿಯೂ ಪ್ರಜ್ವಲ್‌ಗೆ ನೋಟಿಸ್ ತಲುಪಿರಲಿಲ್ಲ. ಅಫಿದವಿಟ್‌ನಲ್ಲಿನ ವಿಳಾಸದಲ್ಲಿ ಅವರಿಲ್ಲವೆಂಬ ಉತ್ತರ ಕೇಳಿ ಬಂದಿತ್ತು. ಪೋಸ್ಟ್, ಕೋರ್ಟ್ ಅಮೀನರು ಮತ್ತು ಹಾಸನ ಜಿಲ್ಲಾ ನ್ಯಾಯಾಧೀಶರ ಮೂಲಕ ತಲುಪಿಸುವ ಪ್ರಯತ್ನ ಕೂಡ ವಿಫಲವಾಗಿತ್ತು.