ಋಣ ಪರಿಹಾರ ಕಾಯ್ದೆಯಲ್ಲಿನ ಗೊಂದಲ ಪರಿಹಾರಕ್ಕೆ ಆಗ್ರಹ
ಬೆಂಗಳೂರು, ಸೆ.30: ರಾಜ್ಯದ ಬಡ ಕುಟುಂಬಗಳಿಗೆ ಖಾಸಗಿ ಸಾಲದ ಶೂಲದಿಂದ ಮುಕ್ತಿ ನೀಡಲು ಮೈತ್ರಿ ಸರಕಾರ ಜಾರಿಗೆ ತಂದಿರುವ ಕರ್ನಾಟಕ ಋಣ ಪರಿಹಾರ ಕಾಯ್ದೆಯಲ್ಲಿ ಕೆಲ ಗೊಂದಲಗಳಿದ್ದು, ಅವುಗಳನ್ನು ಸರಿಪಡಿಸಬೇಕೆಂದು ರಾಜ್ಯ ಆಭರಣ ವರ್ತಕರ ಒಕ್ಕೂಟ ಸರಕಾರವನ್ನು ಆಗ್ರಹಿಸಿದೆ.
ಕಾಯ್ದೆಯ ಅನುಷ್ಠಾನಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಇದರಲ್ಲಿರುವ ಕೆಲ ಗೊಂದಲಗಳನ್ನು ಸರಿಪಡಿಸಬೇಕು. ಸರಕಾರಿ ನಿಯಮಾವಳಿ ಉಲ್ಲಂಘಿಸಿ ಹಣಕಾಸೇತರ ಸಂಸ್ಥೆಗಳು ಹಾಗೂ ಲೇವಾದೇವಿದಾರರು ಅಡಮಾನ ಸಾಲದ ಮೇಲೆ ಬಡ್ಡಿ ಮತ್ತು ಚಕ್ರಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಅಂತಹ ಸಾಲಗಳನ್ನು ಮನ್ನಾ ಮಾಡಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಬಿ. ರಾಮಾಚಾರಿ ತಿಳಿಸಿದ್ದಾರೆ.
ನಮಗೂ ವಿನಾಯಿತಿ ನೀಡಿ: ಸರಕಾರಿ ನಿಯಮದಂತೆ ಅಡಮಾನ ಸಾಲಕ್ಕೆ ವರ್ಷಕ್ಕೆ ಶೇ.14 ಹಾಗೂ ಕೈ ಸಾಲಕ್ಕೆ ಶೇ.16 ಬಡ್ಡಿ ವಿಧಿಸುತ್ತೇವೆ. ಆದರೆ, ಬೇರೆ ಹಣಕಾಸಿನ ಸಂಸ್ಥೆಗಳು ಸಣ್ಣ ರೈತರು, ಕೃಷಿಕರು ಮತ್ತು ಬಡ ಕುಟುಂಬಗಳು ಪಡೆದಿರುವ ಚಿನ್ನದ ಸಾಲ ಮೇಲೆ ವರ್ಷಕ್ಕೆ ಶೇ.36 ಬಡ್ಡಿ ಹಾಕುತ್ತಾರೆ. ಕಾಯ್ದೆಯಲ್ಲಿ ಅಂಥವರಿಗೆ ವಿನಾಯಿತಿ ನೀಡಿದ್ದಾರೆ. ಆದರೆ, ನಮಗೆ ವಿನಾಯಿತಿ ಕೊಟ್ಟಿಲ್ಲ ಎಂದಿದ್ದಾರೆ.