ಅ.1ರಿಂದ ಯುವ ದಸರಾ ಆರಂಭ: ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಉದ್ಘಾಟನೆ

ಮೈಸೂರು,ಸೆ.30: ಯುವಕರನ್ನು ಹುಚ್ಚೆದ್ದು ಕುಣಿಸುವ ಯುವ ದಸರಾ ಅ.1 ರ ಮಂಗಳವಾರದಿಂದ ಅ.6 ರ ವರೆಗೆ ನಗರದ ಮಹರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಉದ್ಘಾಟಿಸಲಿದ್ದಾರೆ ಎಂದು ಯುವ ದಸರಾ ಉಪ ವಿಶೇಷಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದರು.
ಅ.1 ರಂದು ಸಂಜೆ 6.45 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಉದ್ಘಾಟನೆಯಾಗಲಿದ್ದು, ಖ್ಯಾತ ಗಾಯಕಿ ರಾನು ಮೊಂಡಲ್ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದರು. ಚಲನಚಿತ್ರ ನಿರ್ದೇಶಕ ನಾಗಶೇಖರ್ ತಂಡದವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಖ್ಯಾತ ಬಾಲಿವುಡ್ ಗಾಯಕರಾದ ಶ್ರೀಗುರು ರಾಂಧವ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಅ.2 ರಂದು ಸಂಜೆ ಹಿನ್ನಲೆ ಗಾಯಕಿ ಕು.ಸಂಗೀತ ರವೀಂದ್ರನಾಥ್ ರವರಿಂದ ಸಂಗೀತ ರಸ ಸಂಜೆ ಇದ್ದು, ಖ್ಯಾತ ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಸಂಗೀತ ರಸದೌತಣ ನೀಡಲಿದ್ದಾರೆ.
ಅ.3 ರಂದು ಖ್ಯಾತ ಬಾಲಿವುಡ್ ಗಾಯಕಿ ಮನಾಲಿ ಠಾಕೂರ್ ಇವರಿಂದ ಸಂಗೀತ ರಸಮಂಜರಿ ಆಯೋಜಿಸಲಾಗಿದ್ದು, ಅ.4 ರಂದು ಖ್ಯಾತ ಕನ್ನಡ ಗಾಯಕರಾದ ಚಂದನ್ ಶೆಟ್ಟಿ ಮತ್ತು ಸಂಚಿತ್ ಹೆಗ್ಡೆ ಇವರಿಂದ ಸಂಗೀತ ರಸಮಂಜರಿ ಇದ್ದು, ಮಾನ್ವಿತ್ ಹರೀಶ್, ಸಂಯುಕ್ತ ಹೆಗಡೆ ಮತ್ತು ಇತರೆ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅ.5 ರಂದು ಕನ್ನಡ ಚಲನಚಿತ್ರ ಖ್ಯಾತ ಕಲಾವಿದರಿಂದ ಸ್ಯಾಂಡಲ್‍ವುಡ್ ನೈಟ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಅ. 6 ರಂದು ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ಪ್ರೀತಮ್ ಚಕ್ರವರ್ತಿ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಯುವ ದಸರಾ ಕಾರ್ಯಕ್ರಮಕ್ಕೆ 1.5 ಕೋಟಿ ಅಂದಾಜಿಸಲಾಗಿದ್ದು, ಕೆಲವು ಕಾರ್ಯಕ್ರಮಗಳು ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ನಟ ನಟಿಯರು ಮತ್ತು ಸಂಗೀತ ನಿರ್ದೇಶಕರುಗಳಿಗೆ ಇಂತಿಷ್ಟೇ ಸಂಭಾವನೆ ನೀಡುತ್ತೇವೆ ಎಂದು ಹೇಳಲಾಗುವುದಿಲ್ಲ, ಒಟ್ಟಾರೆ ಕಾರ್ಯಕ್ರಮವನ್ನು ನೋಡಿಕೊಂಡು ಪ್ರಾಯೋಜಕತ್ವದೊಂದಿಗೆ ಸೇರಿ ಸಂಭಾವನೆ ನೀಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ದಸರಾ ಸಮಿತಿ ಅಧ್ಯಕ್ಷ ಗೋಕುಲ್ ಗೋವರ್ಧನ್, ಉಪಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಕಾರ್ಯಾಧ್ಯಕ್ಷ ಡಿ.ಬಿ.ಲಿಂಗಣ್ಣಯ್ಯ, ಕಾರ್ಯದರ್ಶಿ ಜಿ.ಎಸ್.ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







