ಬಿಬಿಎಂಪಿ ಮೇಯರ್ ಚುನಾವಣೆ: ಬಿಜೆಪಿಯಿಂದ ಮೇಯರ್ ಅಭ್ಯರ್ಥಿಯಾಗಿ ಇಬ್ಬರು ನಾಮಪತ್ರ ಸಲ್ಲಿಕೆ!
ಗೊಂದಲದ ಗೂಡಾಗಿರುವ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ

ಬಿಜೆಪಿ ಮೇಯರ್ ಅಭ್ಯರ್ಥಿಯಾಗಿ ಎಂ.ಗೌತಮ್ ಕುಮಾರ್ ಮಂಗಳವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದರು.
ಬೆಂಗಳೂರು, ಅ.1: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಚುನಾವಣೆಗೆ ಸಂಬಂಧಿಸಿ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯ ಗೊಂದಲ ಇನ್ನೂ ಮುಂದುವರಿದಿದ್ದು, ಪಕ್ಷದ ಅಭ್ಯರ್ಥಿಯಾಗಿ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯು ಜೋಗುವಾಳ್ಯ ವಾರ್ಡ್ನ ಪಾಲಿಕೆ ಸದಸ್ಯ ಎಂ.ಗೌತಮ್ ಕುಮಾರ್ ಹಾಗೂ ಮೇಯರ್ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಬಿಬಿಎಂ ಪ್ರತಿಪಕ್ಷದ ನಾಯಕರಾಗಿರುವ ಬಿಜೆಪಿ ಕಾರ್ಪೊರೇಟರ್ ಪದ್ಮನಾಭ ರೆಡ್ಡಿ ಕೂಡಾ ಮೇಯರ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಮೇಯರ್ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಸೋಮವಾರ ಮಧ್ಯರಾತ್ರಿಯವರೆಗೆ ಬಿಜೆಪಿ ಮುಖಂಡರ ಸಭೆ ನಡೆದಿತ್ತು. ಅಂತಿಮವಾಗಿ ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಗೌತಮ್ ಕುಮಾರ್ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ ಎಂದು ಹೇಳಲಾಗಿದೆ. ಆದರೆ ಇದೀಗ ಪಕ್ಷದಿಂದ ಇಬ್ಬರು ನಾಮಪತ್ರ ಸಲ್ಲಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಉಪ ಮೇಯರ್ ಅಭ್ಯರ್ಥಿಯನ್ನಾಗಿ ಹೊಸಹಳ್ಳಿ ವಾರ್ಡ್ ಸದಸ್ಯೆ ಮಹಾಲಕ್ಷ್ಮೀ ರವೀಂದ್ರ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ.
ಕಾಂಗ್ರೆಸ್ ಈ ಬಾರಿಯೂ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಿದೆ. ಮೈತ್ರಿಕೂಟದಿಂದ ದತ್ತಾತ್ರೇಯ ವಾರ್ಡ್ನ ಕಾಂಗ್ರೆಸ್ ಕಾರ್ಪೊರೇಟರ್ ಆರ್.ಎಸ್.ಸತ್ಯನಾರಾಯಣ ಮೇಯರ್ ಅಭ್ಯರ್ಥಿ ಹಾಗೂ ಜೆಡಿಎಸ್ನಿಂದ ಶಕ್ತಿಗಣಪತಿ ನಗರ ವಾರ್ಡ್ ಕಾರ್ಪೊರೇಟರ್ ಗಂಗಮ್ಮ ಅವರನ್ನು ಉಪಮೇಯರ್ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ.
ಮೇಯರ್ ಅಭ್ಯರ್ಥಿಯಾಗಿ ಆರ್.ಸತ್ಯನಾರಾಯಣ ಮಂಗಳವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದರು.
ಒಟ್ಟು 257 ಸ್ಥಾನಗಳ ಬಿಬಿಎಂಪಿಯಲ್ಲಿ ಬಿಜೆಪಿ 125 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ 104 ಹಾಗೂ ಜೆಡಿಎಸ್ 21 ಸ್ಥಾನಗಳನ್ನು ಹೊಂದಿವೆ. ಏಳು ಪಕ್ಷೇತರ ಸದಸ್ಯರಿದ್ದಾರೆ.