ಮೋದಿಯ ‘ಟ್ರಂಪ್ ಸರ್ಕಾರ್’ ಹೇಳಿಕೆ: ವಿದೇಶಾಂಗ ಸಚಿವ ಜೈಶಂಕರ್ ಸಮಜಾಯಿಷಿ ನೀಡಿದ್ದು ಹೀಗೆ…
ವಾಷಿಂಗ್ಟನ್, ಅ.1: ಪ್ರಧಾನಿ ನರೇಂದ್ರ ಮೋದಿ ಹ್ಯೂಸ್ಟನ್ ನಲ್ಲಿ ನಡೆದ ತಮ್ಮ ‘ಹೌಡಿ ಮೋದಿ' ಕಾರ್ಯಕ್ರಮದಲ್ಲಿ ‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಎಂದು ಹೇಳಿರುವುದನ್ನು ತಪ್ಪಾಗಿ ಅರ್ಥೈಸಬಾರದು ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ‘ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರ ಸಂದರ್ಭ ಬಳಸಿದ ಪದಗಳನ್ನಷ್ಟೇ ಮೋದಿ ಹೇಳಿದ್ದಾರೆ' ಎಂದಿದ್ದಾರೆ.
ಪ್ರಧಾನಿ ಮೋದಿ 2020ರ ಚುನಾವಣೆಗೆ ಟ್ರಂಪ್ ಅಭ್ಯರ್ಥಿತನವನ್ನು ಬೆಂಬಲಿಸಿ ಹೇಳಿಕೆ ನೀಡಿಲ್ಲ ಎಂದು ಹೇಳಿದ ಜೈಶಂಕರ್, “ಪ್ರಧಾನಿ ಮೋದಿ ಆ ದಿನ ಹೇಳಿದ್ದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಭ್ಯರ್ಥಿ ಟ್ರಂಪ್ ಈ ಮಾತುಗಳನ್ನು (ಅಬ್ ಕಿ ಬಾರ್ ಟ್ರಂಪ್ ಸರ್ಕಾರ್) ಎಂದು ಬಳಸಿದ್ದರು ಎಂದಿದ್ದರು. ಹಾಗಿರುವಾಗ ಪ್ರಧಾನಿ ಹಿಂದಿನ ಬಗ್ಗೆ ಮಾತನಾಡುತ್ತಿದ್ದರೆಂದು ಅರ್ಥ'' ಎಂದರು.
“ಪ್ರಧಾನಿ ಮಾತುಗಳನ್ನು ತಪ್ಪಾಗಿ ಅರ್ಥೈಸಿ ಯಾರಿಗೂ ನೀವು ಒಳ್ಳೆಯದನ್ನು ಮಾಡುತ್ತಿದ್ದೀರಿ ಎಂದು ನನಗನಿಸುವುದಿಲ್ಲ” ಎಂದೂ ಜೈಶಂಕರ್ ಮಾಧ್ಯಮಗಳ ಕುರಿತಂತೆ ಹೇಳಿದರು.