ಕಾಶ್ಮೀರ ಮಾನವಹಕ್ಕು ಪರಿಸ್ಥಿತಿಯ ಬಗ್ಗೆ ಅ.22ರಂದು ಅಮೆರಿಕ ಕಾಂಗ್ರೆಸ್ನಲ್ಲಿ ವಿಚಾರಣೆ
ವಾಶಿಂಗ್ಟನ್, ಅ. 1: ದಕ್ಷಿಣ ಏಶ್ಯದಲ್ಲಿನ, ಅದರಲ್ಲೂ ಮುಖ್ಯವಾಗಿ ಕಾಶ್ಮೀರದಲ್ಲಿನ ಮಾನವಹಕ್ಕುಗಳ ಪರಿಸ್ಥಿತಿಯ ಬಗ್ಗೆ ಅಕ್ಟೋಬರ್ 22ರಂದು ವಿಚಾರಣೆ ನಡೆಸುವುದಾಗಿ ಅಮೆರಿಕ ಸಂಸತ್ತು ಕಾಂಗ್ರೆಸ್ನ ಉಪ ಸಮಿತಿಯೊಂದು ಸೋಮವಾರ ತಿಳಿಸಿದೆ.
ದಕ್ಷಿಣ ಏಶ್ಯದ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆ ಅನುಸರಿಸುತ್ತಿರುವ ಎಲ್ಲ ನೀತಿಗಳ ಮೇಲುಸ್ತುವಾರಿ ವಹಿಸಿರುವ ಉಸ್ತುವಾರಿ ಸಹಾಯಕ ವಿದೇಶ ಕಾರ್ಯದರ್ಶಿ (ದಕ್ಷಿಣ ಮತ್ತು ಮಧ್ಯ ಏಶ್ಯ) ಆ್ಯಲಿಸ್ ವೆಲ್ಸ್ ಈ ವಿಚಾರಣೆಯ ವೇಳೆ ಸಾಕ್ಷ್ಯನುಡಿಯಲಿದ್ದಾರೆ ಎಂದು ಏಶ್ಯ ಕುರಿತ ಹೌಸ್ ಉಪಸಮಿತಿಯ ಅಧ್ಯಕ್ಷ ಬ್ರಾಡ್ ಶೆರ್ಮನ್ ಹೇಳಿದರು.
‘‘ವಿಚಾರಣೆಯಲ್ಲಿ ಕಾಶ್ಮೀರ ಕಣಿವೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು. ಅಲ್ಲಿ ಹಲವು ರಾಜಕೀಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅಲ್ಲಿನ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದೆ ಹಾಗೂ ಇಂಟರ್ನೆಟ್ ಮತ್ತು ಟೆಲಿಫೋನ್ ಸಂಪರ್ಕಗಳು ಕಡಿತಗೊಂಡಿವೆ’’ ಎಂದು ಶೆರ್ಮನ್ ಹೇಳಿಕೆಯೊಂದರಲ್ಲಿ ತಿಳಿಸಿದರು.
ಸಮಿತಿಯು ಕಾಶ್ಮೀರದಲ್ಲಿನ ಮಾನವೀಯ ಸ್ಥಿತಿಗತಿಯ ಬಗ್ಗೆಯೂ ಪರಿಶೀಲನೆ ನಡೆಸಲಿದೆ ಹಾಗೂ ಕಾಶ್ಮೀರಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ, ಔಷಧ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆ ಆಗುತ್ತಿದೆಯೇ ಎಂಬುದನ್ನು ಅದು ಪರಿಶೀಲಿಸಲಿದೆ.
ದಕ್ಷಿಣ ಏಶ್ಯದಲ್ಲಿ ಮಾನವಹಕ್ಕುಗಳ ಮೇಲೆ ನಿಗಾ ಇಟ್ಟಿರುವ ಪ್ರಜಾಪ್ರಭುತ್ವ, ಮಾನವಹಕ್ಕುಗಳು ಮತ್ತು ಕಾರ್ಮಿಕ ಬ್ಯೂರೋದ ಉಪ ಸಹಾಯಕ ಕಾರ್ಯದರ್ಶಿ ಸ್ಕಾಟ್ ಬಸ್ಬಿ ಕೂಡ ಈ ವಿಚಾರಣೆಯಲ್ಲಿ ಸಾಕ್ಷ ನುಡಿಯಲಿದ್ದಾರೆ.
‘‘ವಿದೇಶಾಂಗ ಇಲಾಖೆಯ ಇತರ ಅಧಿಕಾರಿಗಳನ್ನೂ ನಾವು ಆಹ್ವಾನಿಸಿದ್ದೇವೆ ಹಾಗೂ ಈ ವಿಷಯಗಳಲ್ಲಿ ಖಾಸಗಿ ಮಾನವಹಕ್ಕುಗಳ ಹೋರಾಟಗಾರರಿಂದಲೂ ಅಭಿಪ್ರಾಯ ಕೇಳುತ್ತೇವೆ’’ ಎಂದು ಶೆರ್ಮನ್ ಹೇಳಿದರು.
‘‘ಕಾಶ್ಮೀರ ಕಣಿವೆಯಲ್ಲಿ ವಾಸಿಸುತ್ತಿದ್ದ ಅಮೆರಿಕನ್ನರನ್ನು ಸ್ಯಾನ್ ಫೆರ್ನಾಂಡೊ ಕಣಿವೆಯಲ್ಲಿ ಆಗಸ್ಟ್ನಲ್ಲಿ ಭೇಟಿಯಾಗುವ ಅವಕಾಶವೊಂದು ನನಗೆ ಲಭಿಸಿತ್ತು. ಈ ಸಂದರ್ಭದಲ್ಲಿ ನನ್ನ ಸಹೋದ್ಯೋಗಿ ಸಂಸದ ಆ್ಯಂಡ್ರಿ ಕಾರ್ಸನ್ ಕೂಡ ನನ್ನೊಂದಿಗಿದ್ದರು. ಕಾಶ್ಮೀರದಲ್ಲಿ ತಾವು ಎದುರಿಸಿದ ಕಷ್ಟಗಳ ಬಗ್ಗೆ ಅವರು ನಮ್ಮಲ್ಲಿ ಹೇಳಿಕೊಂಡರು. ಕಾಶ್ಮೀರದಲ್ಲಿ ಇರುವ ತಮ್ಮ ಪ್ರೀತಿಪಾತ್ರರ ಬಗ್ಗೆ ಅವರು ಭೀತಿಯನ್ನೂ ವ್ಯಕ್ತಪಡಿಸಿದರು. ಬಳಿಕ ನಾನು ಇತರ ಹಲವು ಕಾಶ್ಮೀರಿ ಅಮೆರಿಕನ್ನರೊಂದಿಗೂ ಮಾತನಾಡಿದೆ’’ ಎಂದರು.