ಅಂಟಾರ್ಕ್ಟಿಕದ ಬೃಹತ್ ಹಿಮರಾಶಿ ಕುಸಿತ
ವಾಶಿಂಗ್ಟನ್, ಅ. 1: ಅಂಟಾರ್ಕ್ಟಿಕದ 1,582 ಚದರ ಕಿಲೋಮೀಟರ್ಗಿಂತಲೂ ಅಧಿಕ ಪ್ರದೇಶದ ಹಿಮಗಡ್ಡೆ ಇತ್ತೀಚಿನ ದಿನಗಳಲ್ಲಿ ಕುಸಿದಿದೆ, ಆದರೆ ಇದು ಸಾಮಾನ್ಯ ನೈಸರ್ಗಿಕ ಪ್ರಕ್ರಿಯೆಯಾಗಿದ್ದು ಹವಾಮಾನ ಬದಲಾವಣೆಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
‘ಡಿ28’ ಎಂದು ಹೆಸರಿಸಲಾದ ಹಿಮಗಡ್ಡೆ ಸೆಪ್ಟಂಬರ್ 24 ಮತ್ತು 25ರ ನಡುವಿನ ಅವಧಿಯಲ್ಲಿ ‘ಅಮೇರಿ’ ಐಸ್ ಶೆಲ್ಫ್ನಿಂದ ಬೇರ್ಪಟ್ಟಿದೆ ಎನ್ನುವುದು ಯುರೋಪಿಯನ್ ಮತ್ತು ಅಮೆರಿಕನ್ ಉಪಗ್ರಹಗಳ ವೀಕ್ಷಣೆಗಳಿಂದ ತಿಳಿದುಬಂದಿದೆ.
ಈ ಹಿಮಗಡ್ಡೆಯು 210 ಮೀಟರ್ ದಪ್ಪವಾಗಿದ್ದು, 31,500 ಕೋಟಿ ಟನ್ ಮಂಜುಗಡ್ಡೆಯನ್ನು ಹೊಂದಿತ್ತು ಎಂದು ಅಮೆರಿಕದ ನೀರ್ಗಲ್ಲು ಪರಿಣಿತೆ ಹೆಲನ್ ಅಮಂಡಾ ಫ್ರಿಕರ್ ಹೇಳಿದರು.
‘‘ಐಸ್ ಶೆಲ್ಫ್ಗಳು ಹಿಮಗಡ್ಡೆಯನ್ನು ಕಳೆದುಕೊಳ್ಳಲೇ ಬೇಕು, ಯಾಕೆಂದರೆ ಅವುಗಳು ಹಿಮಗಡ್ಡೆಯನ್ನು ಸಂಪಾದಿಸುತ್ತವೆ. ಒಂದೇ ಗಾತ್ರವನ್ನು ಹೊಂದಲು ಅವುಗಳು ಬಯಸುತ್ತವೆ’’ ಎಂದು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ಸ್ಕ್ರಿಪ್ಸ್ ಸಾಗರ ಅಧ್ಯಯನ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ ಫ್ರಿಕರ್ ತಿಳಿಸಿದರು.