ಹಾಕಿ: ಬೆಲ್ಜಿಯಂ ವಿರುದ್ಧ್ದ ಸತತ 4ನೇ ಜಯ ದಾಖಲಿಸಿದ ಭಾರತ
ಆಂಟ್‌ವರ್ಪ್(ಬೆಲ್ಜಿಯಂ), ಅ.1: ಭಾರತೀಯ ಪುರುಷರ ತಂಡ ಹಾಲಿ ವಿಶ್ವ ಹಾಗೂ ಯುರೋಪಿಯನ್ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿತು. ಈ ಮೂಲಕ ಬೆಲ್ಜಿಯಂ ಟೂರ್‌ನಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿತು.
ಇಲ್ಲಿ ಮಂಗಳವಾರ ನಡೆದ ನಾಲ್ಕನೇ ಪಂದ್ಯದಲ್ಲಿ ವಿಶ್ವದ ನಂ.5ನೇ ತಂಡ ಭಾರತದ ಪರ ಅಮಿತ್ ರೋಹಿದಾಸ್(10ನೇ ನಿಮಿಷ) ಹಾಗೂ ಸಿಮ್ರಾನ್‌ಜೀತ್ ಸಿಂಗ್(52ನೇ ನಿ.)ತಲಾ ಒಂದು ಗೋಲು ಗಳಿಸಿದರು. ಬೆಲ್ಜಿಯಂ ಪರ ನಾಯಕ ಫೆಲಿಕ್ಸ್ ಡೆನಯರ್ 33ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.
ಬೆಲ್ಜಿಯಂ ಟೂರ್‌ನಲ್ಲಿ ಆಡಿದ ಮೂರನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ 5-1 ಅಂತರದ ಗೆಲುವಿನ ಆತ್ಮವಿಶ್ವಾಸದಲ್ಲಿ ತೇಲುತ್ತಿದ್ದ ಭಾರತ ಆತಿಥೇಯರ ವಿರುದ್ಧ ಆಕ್ರಮಣಕಾರಿ ಆರಂಭ ಪಡೆಯಿತು. 10ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಈ ಅವಕಾಶವನ್ನು ರೋಹಿದಾಸ್ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.
ಮೊದಲಾರ್ಧದ ಪಂದ್ಯ ಕೊನೆಯಾಗಲು ಐದು ನಿಮಿಷ ಬಾಕಿ ಇರುವಾಗ ಬೆಲ್ಜಿಯಂ ತನ್ನ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಎರಡನೇ ಕ್ವಾರ್ಟರ್‌ನಲ್ಲಿ ಶ್ರೀಜೇಶ್ ಬದಲಿಗೆ ಆಡಿದ ಭಾರತದ ಗೋಲ್‌ಕೀಪರ್ ಕೃಷ್ಣ ಪಾಠಕ್ ವಿಶ್ವ ಚಾಂಪಿಯನ್ ತಂಡ ಸ್ಕೋರನ್ನು ಸಮಬಲಗೊಳಿಸದಂತೆ ತಡೆಯೊಡ್ಡಿದರು.
ಬೆಲ್ಜಿಯಂ 3ನೇ ಕ್ವಾರ್ಟರ್‌ನ 33ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಫೆಲಿಕ್ಸ್ ಡೆನಯರ್ ಡ್ರಾಗ್ ಫ್ಲಿಕ್‌ನ ಮೂಲಕ ಅಮೋಘ ಗೋಲು ಗಳಿಸಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು.
ಕೊನೆಯ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ವೇಗದ ಆರಂಭ ಪಡೆಯಿತು. ಹಲವು ಪೆನಾಲ್ಟಿ ಅವಕಾಶವನ್ನು ಪಡೆದರೂ ಪಾಠಕ್ ಮತ್ತೊಮ್ಮೆ ಭಾರತದ ರಕ್ಷಣೆಗೆ ನಿಂತರು. ಭಾರತ 52ನೇ ನಿಮಿಷದಲ್ಲಿ ರಚನಾತ್ಮಕ ಟೀಮ್ ಗೋಲ್ ದಾಖಲಿಸಿ 2-1 ಮುನ್ನಡೆ ಪಡೆಯಿತು. ಭಾರತ ಗುರುವಾರ ಮತ್ತೊಮ್ಮೆ ಬೆಲ್ಜಿಯಂ ವಿರುದ್ಧ ಆಡಲಿದೆ.







