2ನೇ ಏಕದಿನ: ಶ್ರೀಲಂಕಾವನ್ನು ಸೋಲಿಸಿದ ಪಾಕಿಸ್ತಾನ
ಆಝಂ ಆಕರ್ಷಕ ಶತಕ, ಜಯಸೂರ್ಯ ಅರ್ಧಶತಕ ವ್ಯರ್ಥ
ಕರಾಚಿ, ಅ.1: ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಸೋಮವಾರ ಆತಿಥೇಯ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ 67 ರನ್‌ಅಂತರದಲ್ಲಿ ಜಯ ಸಾಧಿಸಿದೆ. ಇದರೊಂದಿಗೆ 10 ವರ್ಷಗಳ ಬಳಿಕ ಕರಾಚಿಗೆ ವಾಪಸಾದ ಏಕದಿನ ಕ್ರಿಕೆಟ್‌ನಲ್ಲಿ ಸ್ಮರಣೀಯ ಪ್ರದರ್ಶನ ನೀಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ ಬಾಬರ್ ಆಝಂ ಸಿಡಿಸಿದ ಶತಕದ(115, 105 ಎಸೆತ)ಬೆಂಬಲದಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 305 ರನ್ ಗಳಿಸಿತು. ಬಾಬರ್ ಕ್ಯಾಲೆಂಡರ್ ವರ್ಷದಲ್ಲಿ 19 ಪಂದ್ಯಗಳಲ್ಲಿ 1,000 ರನ್ ಪೂರೈಸಿದರು. ವೇಗವಾಗಿ ಈ ಸಾಧನೆ ಮಾಡಿದ ಪಾಕಿಸ್ತಾನದ ಆಟಗಾರ ಎನಿಸಿಕೊಂಡರು. ಭದ್ರತೆಯ ಭೀತಿಯಲ್ಲಿ ಹಲವು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಪಾಕ್ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ತಂಡ 46.5 ಓವರ್‌ಗಳಲ್ಲಿ 238 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಪಾಕ್‌ನ ಎಡಗೈ ವೇಗದ ಬೌಲರ್ ಉಸ್ಮಾನ್ ಶಿನ್ವಾರಿ 51 ರನ್‌ಗೆ 5 ವಿಕೆಟ್ ಗಳ ಗೊಂಚಲು ಪಡೆದರು.
ಶೆಹಾನ್ ಜಯಸೂರ್ಯ(96) ಕೇವಲ 4 ರನ್‌ನಿಂದ ಚೊಚ್ಚಲ ಶತಕ ವಂಚಿತರಾದರು. ದುಸಾನ್ ಶನಕ ಜೀವನಶ್ರೇಷ್ಠ 68 ರನ್ ಗಳಿಸಿದರು. ಆದರೆ ಈ ಇಬ್ಬರು ಶತಕದ ಜೊತೆಯಾಟದಲ್ಲಿ ಭಾಗಿಯಾದ ಬಳಿಕ ಸತತ ಓವರ್‌ಗಳಲ್ಲಿ ವಿಕೆಟ್ ಕೈಚೆಲ್ಲಿದರು.
ಶ್ರೀಲಂಕಾದ ಅಗ್ರ ಕ್ರಮಾಂಕದ ಅನನುಭವಿ ಆಟಗಾರರಿಗೆ ಎಡಗೈ ವೇಗದ ಬೌಲರ್ ಉಸ್ಮಾನ್ ಶಿನ್ವಾರಿ ಸಿಂಹಸ್ವಪ್ನರಾದರು. ಪ್ರವಾಸಿ ಲಂಕಾ ತಂಡ ಒಂದು ಹಂತದಲ್ಲಿ 28 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 6ನೇ ವಿಕೆಟ್‌ಗೆ 177 ರನ್ ಜೊತೆಯಾಟ ನಡೆಸಿದ ಜಯಸೂರ್ಯ ಹಾಗೂ ಶನಕ ತಂಡವನ್ನು ಕುಸಿತದಿಂದ ಮೇಲೆತ್ತಿದರು.
ಮತ್ತೆ ದಾಳಿಗಿಳಿದ ಶಿನ್ವಾರಿ(5-51)ಜಯಸೂರ್ಯ ವಿಕೆಟನ್ನು ಉರುಳಿಸಿ ಈ ಜೋಡಿಯನ್ನು ಬೇರ್ಪಡಿಸಿದರು. ಶನಕ ಅವರು ಲೆಗ್ ಸ್ಪಿನ್ನರ್ ಶಾದಾಬ್ ಖಾನ್(2-76) ಬೌಲಿಂಗ್‌ನಲ್ಲಿ ಫಕಾರ್ ಝಮಾನ್ ಹಿಡಿದ ಅದ್ಭುತ ಕ್ಯಾಚ್‌ಗೆ ಔಟಾದರು.
ರಾಷ್ಟ್ರೀಯ ಸ್ಟೇಡಿಯಂನಲ್ಲಿ ವಿದ್ಯುತ್ ಕೈಕೊಟ್ಟ ಕಾರಣ ಶ್ರೀಲಂಕಾ ತಂಡದ ರನ್ ಚೇಸಿಂಗ್ ವೇಳೆ 26 ನಿಮಿಷಗಳ ಆಟ ವ್ಯರ್ಥವಾಯಿತು. 2009ರಲ್ಲಿ ಶ್ರೀಲಂಕಾ ತಂಡ ಕೊನೆಯ ಬಾರಿ ಕರಾಚಿಯಲ್ಲಿ ಏಕದಿನ ಪಂದ್ಯ ಆಡಿತ್ತು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ಪರ ಬಾಬರ್ ಆಝಂ 105 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 11ನೇ ಶತಕ (115)ಸಿಡಿಸಿ ನೆರೆದಿದ್ದ 12,000ದಷ್ಟಿದ್ದ ಪ್ರೇಕ್ಷಕರ ಮನ ರಂಜಿಸಿದರು. ಟಾಸ್ ಜಯಿಸಿ ಮೊದಲ ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕ್ ಪರ ಮೊದಲ ವಿಕೆಟ್‌ಗೆ 73 ರನ್ ಸೇರಿಸಿದ ಫಕಾರ್(54) ಹಾಗೂ ಇಮಾಮ್‌ವುಲ್ ಹಕ್(31) ಉತ್ತಮ ಆರಂಭ ಒದಗಿಸಿದರು. ಲೆಗ್ ಸ್ಪಿನ್ನರ್ ವನಿಂದು ಹಸನರಂಗ(2-63) ಇಬ್ಬರು ಆರಂಭಿಕ ಆಟಗಾರರನ್ನು ಔಟ್ ಮಾಡಿದರು. ಆಗ ಹಾರಿಸ್ ಸೊಹೈಲ್(40) ಅವರೊಂದಿಗೆ 3ನೇ ವಿಕೆಟ್‌ಗೆ 111 ರನ್ ಜೊತೆಯಾಟ ನಡೆಸಿದ ಬಾಬರ್ ತಂಡವನ್ನು ಆಧರಿಸಿದರು. ಇಫ್ತಿಖಾರ್ ಅಹ್ಮದ್(ಔಟಾಗದೆ 32)ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.







