ಪಂತ್ ಬದಲಿಗೆ ಸಹಾ: ಕೊಹ್ಲಿ ಸುಳಿವು
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್
ವಿಶಾಖಪಟ್ಟಣ,ಅ.1: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಬದಲಿಗೆ ವೃದ್ಧಿಮಾನ್ ಸಹಾ ಆಡಲಿದ್ದಾರೆ ಎಂದು ಭಾರತ ನಾಯಕ ವಿರಾಟ್ ಕೊಹ್ಲಿ ಮಂಗಳವಾರ ಸುಳಿವು ನೀಡಿದ್ದಾರೆ.
ಗಾಯದ ಸಮಸ್ಯೆ ಎದುರಿಸುತ್ತಿದ್ದ ಕೋಲ್ಕತಾದ 34ರ ಹರೆಯದ ಸಹಾ ದೀರ್ಘ ಸಮಯದಿಂದ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.ಆಗಸ್ಟ್ ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ತಂಡಕ್ಕೆ ವಾಪಸಾಗಿದ್ದರು. ಆದರೆ, ಅವರು ವಿಂಡೀಸ್ ವಿರುದ್ದ ಆಡುವ ಅವಕಾಶವನ್ನು ಪಡೆದಿರಲಿಲ್ಲ. ಎರಡೂ ಪಂದ್ಯಗಳಲ್ಲಿ ಪಂತ್ ವಿಕೆಟ್‌ಕೀಪಿಂಗ್ ಮಾಡಿದ್ದರು.
‘‘ಸಹಾ ಇದೀಗ ಫಿಟ್ ಆಗಿದ್ದು, ಸರಣಿಯ ಮೊದಲ ಪಂದ್ಯಕ್ಕೆ ಲಭ್ಯವಿರುತ್ತಾರೆ. ಅವರ ವಿಕೆಟ್‌ಕೀಪಿಂಗ್ ಸಾಮರ್ಥ್ಯವನ್ನು ಎಲ್ಲರೂ ನೋಡಿದ್ದಾರೆ. ಅವರು ಬ್ಯಾಟಿಂಗ್ ಮಾಡಲು ಅವಕಾಶ ಲಭಿಸಿದಾಗಲೆಲ್ಲಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅವರು ಗಾಯದಿಂದಾಗಿ ದೂರ ಉಳಿದಿದ್ದು ಬೇಸರದ ಸಂಗತಿ. ನನ್ನ ಪ್ರಕಾರ ಅವರು ವಿಶ್ವಶ್ರೇಷ್ಠ ಕೀಪರ್’’ ಎಂದು ಕೊಹ್ಲಿ ಶ್ಲಾಘಿಸಿದರು.
ಸಹಾಗೆ ಭುಜನೋವು ಕಾಣಿಸಿಕೊಳ್ಳುವ ಮೊದಲು 2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೊನೆಯ ಬಾರಿ ಆಡಿದ್ದರು. ಸಹಾ ಅನುಪಸ್ಥಿತಿಯಲ್ಲಿ ಆಡುವ ಅವಕಾಶ ಪಡೆದ ಪಂತ್ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಟೆಸ್ಟ್‌ನಲ್ಲಿ ತಂಡದ ಪ್ರಮುಖ ವಿಕೆಟ್‌ಕೀಪರ್ ಆಗಿ ಹೊರಹೊಮ್ಮಿದ್ದರು. 21ರ ಹರೆಯದ ಪಂತ್ ಇತ್ತೀಚೆಗಿನ ದಿನಗಳಲ್ಲಿ ತನ್ನ ಕಳಪೆ ಪ್ರದರ್ಶನದಿಂದ ತೀವ್ರ ಟೀಕೆಗೆ ಒಳಗಾಗಿದ್ದರು. ಸಹಾ ಈ ತನಕ 32 ಟೆಸ್ಟ್ ಪಂದ್ಯಗಳಲ್ಲಿ 30.63ರ ಸರಾಸರಿಯಲ್ಲಿ 1,164 ರನ್ ಗಳಿಸಿದ್ದಾರೆ. ಆಡುವ ಬಳಗದಲ್ಲಿ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜ ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳಾಗಿದ್ದು, ಕುಲದೀಪ ಯಾದವ್ ಬದಲಿಗೆ ಹನುಮ ವಿಹಾರಿ ಮೂರನೇ ಸ್ಪಿನ್ನರ್ ಆಗಿರುತ್ತಾರೆ ಎಂದು ಕೊಹ್ಲಿ ಸ್ಪಷ್ಟಪಡಿಸಿದರು. ಜಡೇಜ ವಿಂಡೀಸ್ ವಿರುದ್ಧ್ದ ಸರಣಿಯಲ್ಲಿ ಎರಡೂ ಪಂದ್ಯಗಳಲ್ಲಿ ಆಡಿದ್ದರು. ಅಶ್ವಿನ್ ಬೆಂಚ್ ಬಿಸಿ ಮಾಡಿದ್ದರು.







