Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. 150 ತುಂಬಿತೇ ಬಾಪೂ; ಮತ್ತೊಮ್ಮೆ...

150 ತುಂಬಿತೇ ಬಾಪೂ; ಮತ್ತೊಮ್ಮೆ ಬರುವಿರಾ?

ನಾ. ದಿವಾಕರನಾ. ದಿವಾಕರ1 Oct 2019 11:53 PM IST
share
150 ತುಂಬಿತೇ ಬಾಪೂ; ಮತ್ತೊಮ್ಮೆ ಬರುವಿರಾ?

ಬಾಪು, ನೀವು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರದೆ ಹೋಗಿದ್ದರೆ ನಮ್ಮ ದೇಶ ಬ್ರಿಟಿಷರ ವಸಾಹತು ಆಳ್ವಿಕೆಯಿಂದ ಮುಕ್ತವಾಗುತ್ತಿತ್ತೇ? ಎಂದು ಮುಗ್ಧ ಮಗುವೊಂದು ನಿಮ್ಮನ್ನು ಕೇಳಿದರೆ ನೀವೇನು ಹೇಳುವಿರಿ ?

 ಬಹುಶಃ ‘‘ಹಾಗೇನಿಲ್ಲ ಮಗು ನಾನು ಇರದೆ ಹೋಗಿದ್ದರೂ ಭಾರತ ಖಂಡಿತವಾಗಿಯೂ ಮುಕ್ತವಾಗುತ್ತಿತ್ತು’’ ಎಂದು ಹೇಳುತ್ತೀರೇನೋ.
ಆಗ ಮತ್ತೊಂದು ಮಗು ನಿಮ್ಮನ್ನು ಕೇಳುತ್ತದೆ. ತಾತ, ನಮಗೆ ನಿಜಕ್ಕೂ ಸ್ವಾತಂತ್ರ್ಯ ಬಂದಿದೆಯೇ ?

ಈಗ ನೀವು ಗಲಿಬಿಲಿಗೊಳ್ಳುವಿರಿ. ನಿಮ್ಮ ಮುರಿದ ಕನ್ನಡಕ ಬಿದ್ದುಹೋಗಬಹುದು. ತಡಕಾಡುವಿರಿ. ನಿಮ್ಮ ನವಿರಾದ ಬೋಳುತಲೆಯನ್ನೇ ಸವರಿಕೊಳ್ಳುವಿರಿ. ನಿಮ್ಮ ಊರುಗೋಲು ಅತ್ತಿತ್ತ ಹೊಯ್ದಿಡಬಹುದು. ಅಲ್ಲವೇ ?
‘‘ಯಾಕೆ ಮಗೂ ಸ್ವಾತಂತ್ರ್ಯ ಬಂದಿಲ್ಲವೇ ಏಕೆ ಹೀಗೆ ಮಾತಾಡ್ತೀ, ನೋಡು ಎಷ್ಟು ಸ್ವಚ್ಛವಾಗಿದೆ ನನ್ನ ದೇಶ’’ ಎಂದು ಹೇಳುವಿರೇನೋ.
ಆಗ ಆ ಹಸುಳೆ ನಿಮ್ಮ ಊರುಗೋಲಿನ ಮತ್ತೊಂದು ತುದಿಯನ್ನು ಹಿಡಿದು ನಿಮ್ಮನ್ನು ಎಳೆದುತರುತ್ತದೆ. ಹಟ್ಟಿಯೊಂದರ ಬಳಿಗೆ, ಹಟ್ಟಿಯ ಮುಂದೆ ಕೆಂಪು ಬಣ್ಣದ ಚಿತ್ತಾರವನ್ನು ತೋರಿಸಿ ಅಲ್ಲಿ ನೋಡಿ ತಾತ ಎನ್ನುತ್ತದೆ.
ನಿಮ್ಮ ಗಮನ ಕೆಂಪು ಬಣ್ಣದ ಚೆಲ್ಲಿದ ಚಿತ್ತಾರದತ್ತ ಹೋಗುತ್ತದೆ. ‘‘ಇದೇನು ಮಗೂ ನನಗೆ ಕಲೆಯ ಬಗ್ಗೆ ಅಷ್ಟೇನೂ ಗೊತ್ತಿಲ್ಲ ಯಾರದೋ ಆಧುನಿಕ ಕಲೆ ಇರಬೇಕು’’ ಎಂದು ಹಟ್ಟಿಯ ಒಳಗೆ ನುಸುಳುತ್ತೀರಿ.
ಅಲ್ಲೊಬ್ಬಳ ರೋದನ ಹಟ್ಟಿಯ ಸೂರನ್ನೇ ಕಿತ್ತೊಗೆಯುವಂತಿರುತ್ತದೆ. ಒಬ್ಬ ತಾಯಿ ತನ್ನ ಒಡಲ ಕುಡಿಯನ್ನು ಕಳೆದುಕೊಂಡರೆ ಮಾತ್ರ ಈ ಆಕ್ರಂದನ ಸಾಧ್ಯ ಎಂದು ನಿಮ್ಮ ಸೂಕ್ಷ್ಮ ಮನಸಿಗೆ ಅರಿವಾಗುತ್ತದೆ.
‘‘ಏಕೆ ತಾಯಿ ಇಷ್ಟೊಂದು ದುಃಖ ಏಕೆ’’? ಈ ನಿಮ್ಮ ಪ್ರಶ್ನೆಗೆ ಕಣ್ಣೀರ ಕೋಡಿಯೇ ಉತ್ತರವಾಗುತ್ತದೆ.

 ನಿಮ್ಮ ಕನ್ನಡಕ ಪ್ರಾಚೀನವಾದರೂ ಕಣ್ಣೋಟ ಇತ್ತೀಚಿನದಲ್ಲವೇ? ಕಾಣ್ಕೆ ಸಾರ್ವಕಾಲಿಕವಲ್ಲವೇ? ತಪಸ್ವಿಯಲ್ಲ ನೀವು, ಆದರೂ ದರ್ಶನವಾಗುತ್ತದೆ. ನಿಮ್ಮ ದೃಷ್ಟಿ ಮಂಜಾಗುವ ಮುನ್ನ ನಿಮಗೆ ಎರಡು ಎಳೆ ಹಸುಳೆಗಳು ಎದುರಾಗುತ್ತವೆ. ರಸ್ತೆ ಬದಿಯಲ್ಲಿ ಕಕ್ಕ ಮಾಡುತ್ತಿದ್ದ ಮಕ್ಕಳ ನೆತ್ತಿಯಿಂದ ಚಿಮ್ಮಿದ ನೆತ್ತರು ನನಗೆ ಕಲಾವಿದನೊಬ್ಬನ ಕುಂಚದ ಕಲೆಯಂತೆ ಕಂಡಿತಲ್ಲಾ ಎಂದು ವಿಷಾದಿಸುತ್ತೀರಿ. ಅಪ್ರಾಪ್ತ ವಯಸ್ಸಿನ ಮಗಳು ತನ್ನ ಕಣ್ಣೆದುರಿನಲ್ಲೇ ಪುರುಷ ಕ್ರೌರ್ಯಕ್ಕೆ ಬಲಿಯಾದುದನ್ನು ನೆನೆದು ಬಿಕ್ಕುವ ತಾಯಿಯ ಹೃದಯ ನಿಮ್ಮ ಕಣ್ಣುಗಳನ್ನು ಮಂಜಾಗಿಸುತ್ತದೆ. ನಿಮಗೇ ಅರಿವಿಲ್ಲದಂತೆ ನಿಮ್ಮ ಧೋತರ ಕಣ್ಣೀರಿನೊಡನೆ ಸರಸವಾಡಲಾರಂಭಿಸುತ್ತದೆ. ‘‘ನಾನು ಬಂದದ್ದಾದರೂ ಏಕೆ? ನನ್ನ ಭಾರತದಲ್ಲಿ ಎಲ್ಲವೂ ಸ್ವಚ್ಛವಾಗಿದೆ ಎಂದು ಹೇಳಿದ್ದರಲ್ಲಾ’’ ಎಂದು ಯೋಚಿಸುತ್ತಾ ಹೊರನಡೆಯುತ್ತೀರಿ. ನಿಮ್ಮ ಬಿರುಸು ನಡಿಗೆಯ ನಡುವೆಯೂ ನಿಮಗೆ ದಂಡಿ ಯಾತ್ರೆ, ಉಪ್ಪಿನ ಸತ್ಯಾಗ್ರಹ, ಜಲಿಯನ್ ವಾಲಾಬಾಗ್, ಚೌರಿಚೌರಾ ಎಲ್ಲವೂ ಕಂಡುಬಿಡುತ್ತದೆ. ಎತ್ತ ಕಣ್ಹಾಯಿಸಿದರೂ ಬ್ರಿಟಿಷರ ಕಾಲದ ಸಮವಸ್ತ್ರಧಾರಿಗಳೇ ಕಾಣುತ್ತಾರೆ. ಒಂದು ಕ್ಷಣ, ನಾನು ಭಾರತದಲ್ಲಿದ್ದೇನೆಯೇ ಎಂದು ಯೋಚಿಸುತ್ತಾ ನಿಮ್ಮ ಸಾಬರಮತಿ ತಲುಪುತ್ತೀರಿ. ಕೊಂಚ ಹೊತ್ತು ವಿಶ್ರಮಿಸಿ.

***

ಓಹ್ ತಾತ ! ಅದೇಕೆ ಬೆವರುತ್ತಿದ್ದೀರಿ? ನಿಮ್ಮದೇ ಆಶ್ರಮವಲ್ಲವೇ? ದೇಶ ಏನೇ ಆಗಲಿ ನಿಮ್ಮ ಸಾಬರಮತಿ ಆಶ್ರಮ ಹಾಗೆಯೇ ಇದೆ. ಆದರೂ ನೋಡಿ ನಿಮ್ಮ ಮಿಂಚುವ ತಲೆಯ ಮೇಲೆ ಬೆವರಿನ ಗುಳ್ಳೆಗಳು ಕನ್ನಡಿಯಂತೆ ಎಲ್ಲವನ್ನೂ ಬಿಂಬಿಸುತ್ತಿವೆಯಲ್ಲಾ. ಓಹ್ ನಿಮಗೆ ನಿಮ್ಮ ತವರಿನ ಮುಸ್ಲಿಮರ ಸ್ಥಿತಿ ಕಂಡು ಅಚ್ಚರಿಯಾಗಿರಬೇಕು. ಸಾಬರಮತಿಯಲ್ಲೇ ನಿಂತಿರಲ್ಲಾ, ಒಮ್ಮೆ ಸುತ್ತಾಡಿ ಬನ್ನಿ. ದಿಕ್ಕಿಲ್ಲದ ಸಾವಿರಾರು ಅನಾಥ ಹೆಣಗಳು ನಿಮ್ಮನ್ನು ಸುತ್ತುವರಿಯುತ್ತವೆ. ನಿಮಗೆ ಇನ್ನೂ ಗೊತ್ತಾಗಿಲ್ಲ. ನಿಮ್ಮ ನಾಡಿನಲ್ಲಿ ಹೆಣಗಳಿಗೂ ಅಸ್ಮಿತೆ ಇದೆ. ನಿಮ್ಮ ಸಾಬರಮತಿಯಿಂದ ತುಸು ದೂರದಲ್ಲೇ ಮುಸ್ಲಿಮರ ಸ್ಥಿತಿ ನೋಡದಿದ್ದರೂ ಅಡ್ಡಿಯಿಲ್ಲ. ಸಾವಿರಾರು ಶವಗಳಿಗೆ ವಾರಸುದಾರರೇ ಇರಲಿಲ್ಲ. ಎರಡು ದಶಕಗಳಾಗುತ್ತಲಿದೆ. ಕೊಂದವರಾರೋ ನೆತ್ತರಿನಲಿ ಮಿಂದವರಾರೋ. ಇರಲಿ ಉಳಿದವರು ಹೇಗೋ ಬದುಕುತ್ತಿದ್ದಾರೆ. ಸತ್ತವರ ಹಿಂದೆ ಯಾರೂ ಹೋಗುವುದಿಲ್ಲ ಅಲ್ಲವೇ? ಆದರೆ ಹೆಕ್ಕಿ ತೆಗೆದು ಗುರುತಿಸಿ ಗುರಿಯಿಟ್ಟು ಎಸೆಯಲಾದ ಅನಾಥ ಜೀವಗಳು ನಿಮ್ಮನ್ನು ಸುತ್ತುವರಿದಿವೆ ಅಲ್ಲವೇ?

‘‘ಭಾರತ ಸ್ವಚ್ಛವಾಗಿದೆ ಎಂದರಲ್ಲಾ ಇದೇಕೆ ಹೀಗೆ?’’ ಎಂದು ಕೇಳುವಿರಾ.
ನಿಜಕ್ಕೂ ಇಲ್ಲಿ ಎಲ್ಲವೂ ಸ್ವಚ್ಛವಾಗಿದೆ ತಾತ. ಅಮೇಧ್ಯ ರಸ್ತೆಗಳಲ್ಲಿ ಕಾಣುವುದಿಲ್ಲ. ಲಕ್ಷಾಂತರ ಶೌಚಗೃಹಗಳು ತಲೆಎತ್ತಿವೆ. ಆದರೂ ನಿಮಗೆ ಕಮಟು ವಾಸನೆ ಬಡಿಯುತ್ತಿದೆಯೇ? ಅದು ನಾಗರಿಕ ಸಮಾಜದ ತಲೆಯೊಳಗಿನ ಹೊಲಸು. ನೀವೇಕೆ ಕಣ್ಣೊರೆಸಿಕೊಳ್ಳುತ್ತಿದ್ದೀರಿ? ಸಾವಿಗೆ ದುಃಖಿಸುವ ನಿಮ್ಮ ಕಾಲದ ಭಾರತ ಈಗಿಲ್ಲ ತಾತ. ಈಗೇನಿದ್ದರೂ ಸಂಭ್ರಮಿಸುವ ಯುಗ. ಅತ್ತ ನೋಡಿ ಗಗನದೆತ್ತರದ ಪ್ರತಿಮೆ ನಿಮ್ಮ ಜೀವಂತಿಕೆಯನ್ನೇ ಕುಬ್ಜ ಮಾಡಿದಂತೆ ಕಾಣುವುದಿಲ್ಲವೇ? ಅದು ನಿಮ್ಮ ಆಪ್ತ ಶಿಷ್ಯ ಸರ್ದಾರ್ ಪಟೇಲ್ ಅವರ ಪ್ರತಿಮೆ. ಪಾಪ ನಿಮ್ಮಿಬ್ಬರ ನಡುವಿನ ಸ್ನೇಹ ಪಾಮರರಿಗೇನು ಗೊತ್ತು. ನಿಮ್ಮಿಂದ ಪಟೇಲರಿಗಾದ ಅನ್ಯಾಯಕ್ಕೆ 600 ಅಡಿ ಪ್ರತಿಮೆಯ ಉತ್ತರ ಅಂತಾರೆ. ನಿಜವೇ ತಾತ? ನಿಮ್ಮ ಪ್ರತಿಮೆಗಳು ಹಾದಿಗೊಂದು ಬೀದಿಗೊಂದು ಇದೆ. ಈ ಮಟ್ಟಕ್ಕೆ ನಾನೇರಬಲ್ಲೆನೇ ಎಂದು ಯೋಚಿಸುವಿರಾ? ಬೇಡ ಬಿಡಿ. ಭಾರತವನ್ನು ಸ್ವಚ್ಛಗೊಳಿಸಲು ನಿಮ್ಮನ್ನು ಬಳಸಿಕೊಳ್ಳುತ್ತಿದ್ದೇವೆ. ನೋಡಿ ಎಲ್ಲರ ಕೈಯಲ್ಲೂ ಕಸಬರಿಗೆ. ಇಲ್ಲದ ಕಸ ಗುಡಿಸುತ್ತಿದ್ದಾರೆ. ಇರುವ ಕಸ ಗುಡಿಸಲು ಅದೋ ನಿಮ್ಮತ್ತಲೇ ಬರುತ್ತಿದ್ದಾರೆ.

‘‘ಇದೇನಿದು ಅಸ್ತಿಪಂಜರಗಳಂತಿದ್ದಾರಲ್ಲಾ, 70 ವರ್ಷ ಆದರೂ ಇವರು ಹೀಗೇ ಇದ್ದಾರೆ ಹೇ ರಾಮ್’’ ಎಂದಿರಾ !
ನಿಮ್ಮ ರಾಮ ಈಗಿಲ್ಲ ಬಿಡಿ. ಯಾವ ಕ್ಷಣದಲ್ಲಿ ‘‘ಹೇ ರಾಮ್’’ ಎಂದು ಕೂಗಿದಿರೋ.
ನಿಮ್ಮಂತೆಯೇ ಅವನೂ ಬಂಧಿಯಾಗಿಬಿಟ್ಟಿದ್ದಾನೆ. ನೀವು ರಾಜಘಾಟ್‌ನಲ್ಲಿ ಅವನು ಅಯೋಧ್ಯೆಯಲ್ಲಿ.
ಇರಲಿ ನಿಮ್ಮತ್ತ ಬರುತ್ತಿದ್ದಾರಲ್ಲಾ ಅವರೊಡನೆ ಸ್ವಲ್ಪಹೊತ್ತು ಮಾತನಾಡುವಿರಾ ತಾತ ? ಚಿಂತೆ ಮಾಡಬೇಡಿ. ಅವರ ಬಳಿ ಯಾವ ಆಯುಧಗಳೂ ಇಲ್ಲ. ದುಡಿಯುವ ಕೈಗಳು ಅರಚಲು ಕೊರಳು ಅಷ್ಟೇ. ಪಾಪ ಎಲ್ಲವನ್ನೂ ಕಳೆದುಕೊಂಡುಬಿಟ್ಟಿದ್ದಾರೆ. ಬ್ರಿಟಿಷರ ಕಾಲದಲ್ಲಿ ಮಾತ್ರ ದಾಸ್ಯ ಇತ್ತು ಎಂದುಕೊಂಡಿರಾ? ಈಗಲೂ ಇದೆ. ಕೊಂಚ ಬದಲಾಗಿದೆ. ಆಗ ಹೇರಲಾಗಿತ್ತು ಈಗ ಹೇರಿಕೊಂಡಿದ್ದೇವೆ ಅಷ್ಟೇ. ನಿಮ್ಮ ರಾಮನ ತಮ್ಮ ಅದಾವ ಘಳಿಗೆಯಲ್ಲಿ ರೇಖೆ ಎಳೆದನೋ ಇನ್ನೂ ಅಳಿಸಿಲ್ಲ. ಪಾಪ ಈ ಬಡಪಾಯಿಗಳು ರೇಖೆಯನ್ನು ದಾಟಲು ಅಂಜುತ್ತಾರೆ.

‘‘ಯಾಕಪ್ಪಾದಾಟಿದರೆ ಏನಾಗುತ್ತೆ? ನಾನು ಎಷ್ಟು ಜನರನ್ನು ದಾಟಿಸಿಲ್ಲವೇ ಆ ಬ್ರಿಟಿಷರನ್ನು ಮಣಿಸಿಲ್ಲವೇ’’ ಎನ್ನುವಿರಾ ?
ಆಹಾ ತಾತ, ನಿಮ್ಮ ಪ್ರಶ್ನೆ ತಮಾಷೆಯಾಗಿದೆ. ಬ್ರಿಟಿಷರು ನಮ್ಮನ್ನು ಬಿಟ್ಟುಹೋಗಿದ್ದಾರಷ್ಟೇ ಅವರ ಪರಂಪರೆ ಇದೆ ಅಲ್ವೇ? ರೇಖೆ ದಾಟಿದರೆ ಅವರ ಚರ್ಮ ದೇಹದಿಂದ ಬೇರೆಯಾಗಿಬಿಡುತ್ತೆ. ನೀವೇ ನೋಡಿ. ಅವರೊಂದಿಗೇ ಮಾತನಾಡಿ ಎಲ್ಲವೂ ತಿಳಿಯುತ್ತೆ. ನೋಡಿ ಅಲ್ಲೊಬ್ಬ ಕಾಣ್ತಿದ್ದಾನೆ. ಅವನ ಚರ್ಮದ ಬಣ್ಣವೇ ಬದಲಾಗಿಬಿಟ್ಟಿದೆ. ಮತ್ತೊಬ್ಬನ ಮೈಯೆಲ್ಲಾ ಸುಟ್ಟ ಗಾಯಗಳು. ಮತ್ತೊಂದು ಹುಡುಗ ಅಳುತ್ತಲೇ ಇರುತ್ತಾನೆ. ಇನ್ನೊಬ್ಬ ಮಹಿಳೆಯನ್ನು ನೋಡಿ ಆಕೆ ಥರಗುಟ್ಟುತ್ತಿದ್ದಾಳೆ. ಹೋಗಿ ತಾತ ಅವರೊಡನೆ ಎರಡು ನಿಮಿಷ ಕಾಲ ಕಳೆಯಿರಿ ನಿಮಗೇ ಎಲ್ಲವೂ ತಿಳಿಯುತ್ತೆ.
ಕೆಲ ಕಾಲ ಅವರೊಡನೆ ಕಾಲ ಕಳೆದ ಗಾಂಧೀಜಿ ನಿಂತಲ್ಲಿ ನಿಲ್ಲಲಾರದೆ ತೊಳಲಾಡುತ್ತಿರುತ್ತಾರೆ. ಚಡಪಡಿಕೆ ಹೆಚ್ಚಾಗುತ್ತದೆ. ಕಣ್ಣುಗಳು ಮಂಜಾಗತೊಡಗುತ್ತವೆ. ಮತ್ತೊಮ್ಮೆ ಹೇರಾಮ್ ಎನ್ನುತ್ತಾರೆ. ಮರದ ಕೆಳಗೆ ವಿಶ್ರಮಿಸಲು ಕುಳಿತು, ‘‘ಏನೆಲ್ಲಾ ನಡೆಯುತ್ತಿದೆಯಲ್ಲಾ ನನ್ನ ಕನಸಿನ ಭಾರತದಲ್ಲಿ ಏಕೆ ಹೀಗಾಗುತ್ತಿದೆ’’ ಎಂದು ವಿಷಾದಿಸುತ್ತಾರೆ.

ನೀವೇ ಕೇಳಿದ್ರಲ್ಲಾ ತಾತ. ನೀವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಕ್ತ ಹರಿಯದಂತೆ ಎಚ್ಚರವಹಿಸಿಬಿಟ್ಟಿರಿ. ಅಹಿಂಸೆಯೇ ನಿಮಗೆ ಪರಮಧರ್ಮವಾಗಿತ್ತಲ್ಲವೇ? ಈಗ ನೋಡಿದಿರಲ್ಲಾ. ನೀವೇ ಹೇಳಿ ತಾತ ನಿಮ್ಮ ಕರ್ಮಭೂಮಿಯಲ್ಲಿ ಏನೇನ್ ಕಂಡ್ರಿ?
‘‘ಹೇಗೆ ಹೇಳಲಿ ಮಗೂ. ಅಲ್ನೋಡು ಅವನ ಕುಲಕಸುಬು, ದನದ ಚರ್ಮ ಸುಲಿಯೋದು. ಇವರು ಅವನ ಚರ್ಮವನ್ನೇ ಸುಲಿದುಹಾಕಿದ್ದಾರೆ. ಮತ್ತೊಬ್ಬಾಕೆ ಅಳುತ್ತಿದ್ದಾಳಲ್ಲಾ ಅವಳ ಗಂಡನನ್ನು ಮನೆಯಲ್ಲೇ ಕೊಂದುಹಾಕಿದ್ದಾರಂತೆ. ಪಾಪ ಊಟ ಮಾಡಲು ದನದ ಮಾಂಸ ಇಟ್ಟಿದ್ದಕ್ಕೆ. ಮತ್ತೊಬ್ಬ ಹಸುವನ್ನು ಸಾಗಿಸುತ್ತಿದ್ದ ಎಂದು ಕೊಂದಿದ್ದಾರೆ. ಅವನ ಎಳೆಯ ಮಗು ಅಳುತ್ತಲೇ ಇತ್ತು. ಮಗೂ ನಿನಗೆ ಗೊತ್ತೇ, ನಾನು ಗೋ ಹತ್ಯೆ ಮಾಡಬೇಡಿ ಎಂದಷ್ಟೇ ಹೇಳಿದೆ. ಮನುಷ್ಯನನ್ನು ಕೊಂದು ಗೋವನ್ನು ರಕ್ಷಿಸಿ ಎಂದು ಎಲ್ಲಿಯೂ ಹೇಳಿಲ್ಲ. ನನಗೆ ಗೋವೂ ಬೇಕು ಮಾನವರೂ ಬೇಕು ಮಗೂ. ಮನುಷ್ಯರೇ ಇಲ್ಲದ ಭಾರತ ಏತಕ್ಕಾಗಿ ಅಲ್ವೇ ? ಅಲ್ನೋಡು ದೇವಸ್ಥಾನಕ್ಕೆ ಹೋದದ್ದಕ್ಕೆ ಅವನಿಗೆ ಬೆಂಕಿ ಹಚ್ಚಿದ್ದಾರೆ. ಇದು ನನ್ನ ಕನಸಿನ ಭಾರತವೇ ಎಂದು ಯೋಚಿಸ್ತಿದ್ದೇನೆ ಮಗೂ’’ ಬಾಪುವಿನ ಕನ್ನಡಕದ ಗಾಜುಗಳು ಒದ್ದೆಯಾಗುತ್ತವೆ.
***
ಗಾಂಧೀಜಿ ತಮ್ಮ ಕನ್ನಡಕವನ್ನು ಒರೆಸಿಕೊಳ್ಳುತ್ತಾ ಅತ್ತಿತ್ತ ನೋಡುತ್ತಾ ಹೆಜ್ಜೆ ಹಾಕುತ್ತಾರೆ. ಚಿಣ್ಣರು, ಯುವಕರು, ವೃದ್ಧರು ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ಎಲ್ಲೆಲ್ಲೂ ತಳಿರು ತೋರಣಗಳು. ರಸ್ತೆಗಳೆಲ್ಲಾ ಮಿರಿಮಿರಿ ಮಿಂಚುತ್ತಿವೆ. ತಮ್ಮದೇ ಪ್ರತಿಮೆಗಳನ್ನೂ ಹೂ ಹಾರಗಳಲ್ಲಿ ಮುಳುಗಿಸಲಾಗಿರುವುದನ್ನು ನೋಡಿ ಗಾಂಧೀಜಿ ಪುಳಕಿತರಾಗುತ್ತಾರೆ. ತುಸು ದೂರದಲ್ಲಿ ಒಂದು ಒಡೆದ ಪ್ರತಿಮೆಯೂ ಎದುರಾಗುತ್ತದೆ. ತಮ್ಮದೇ ತಲೆ ನೆಲಕ್ಕುದುರಿದೆ. ಕೊಂಚಹೊತ್ತಿನ ಹಿಂದೆ ಅಂಬೇಡರ್‌ರ ತಲೆ ಹೀಗೆಯೇ ಇದ್ದುದನ್ನು ನೆನಪಿಸಿಕೊಳ್ಳುತ್ತಾರೆ. ಹಾದಿ ಕ್ರಮಿಸುತ್ತಾ ಹೋದಂತೆ ತಮ್ಮದೇ ಪ್ರತಿಮೆಯೊಂದಕ್ಕೆ ಪೂಜೆ ಸಲ್ಲಿಸುವುದನ್ನೂ ನೋಡುತ್ತಾರೆ. ಅಲ್ಲೆಲ್ಲೋ ಚಪ್ಪಲಿ ಹಾರ ಹಾಕಿದ್ದುದನ್ನೂ ನೆನೆಯುತ್ತಾರೆ. ಏಕೋ ತಲ್ಲಣಿಸುತ್ತಾರೆ. ಹೆಜ್ಜೆ ತಪ್ಪಿದಂತಾಗುತ್ತದೆ. ಉಸಿರು ಕಟ್ಟಿದಂತಾಗುತ್ತದೆ.
ಏನು ಬಾಪು ಕಂಡಿದ್ದೆಲ್ಲವೂ ಕನಸು ಎನಿಸುವುದೇ? ಯಾವುದೋ ದನಿ ಕೇಳುತ್ತದೆ.

ಏನೆಲ್ಲಾ ಕಂಡೆ ಮಗೂ. ನನ್ನ ಕನಸಿನ ಸ್ವಚ್ಛ ಭಾರತದಲ್ಲಿ ನಾನು ಬಯಸಿದ್ದು ಮನಸಿನ ಸ್ವಚ್ಛತೆಯನ್ನು, ರಾಗದ್ವೇಷಗಳಿಲ್ಲದ ಮನುಜ ಲೋಕವನ್ನು. ಹಿಂಸೆ, ದೌರ್ಜನ್ಯ ಇಲ್ಲದ ಸಮಾಜವನ್ನು. ಶೌಚಾಲಯದಲ್ಲಿ ದೇಹಶುದ್ಧಿಯಾಗುತ್ತದೆ. ನನಗೆ ಆತ್ಮ ಶುದ್ಧಿ ಬೇಕಿತ್ತು. ನಾನು ಇಲ್ಲೇನು ನೋಡುತ್ತಿದ್ದೇನೆ. ಸುತ್ತಲೂ ಕೊಳೆತ ಆತ್ಮಗಳನ್ನಲ್ಲವೇ? ನೀನು ಹೇಳಿದ್ದು ಸರಿ ಮಗೂ. ಎಲ್ಲಿ ನೋಡಿದರೂ ಕಸಬರಿಗೆಗಳೇ ಕಾಣುತ್ತಿವೆ. ಇವರು ಏನನ್ನು ಸ್ವಚ್ಛ ಮಾಡುತ್ತಿದ್ದಾರೆ? ನಾನು ಪ್ರೀತಿಸಿದ ಜನರನ್ನೇ ಗುಡಿಸಿಹಾಕುತ್ತಿದ್ದಾರಲ್ಲಾ? ನಿಜ ಮಗೂ ನೀನು ಹೇಳಿದಂತೆ ನನಗೆ ಮಾತನಾಡಲೂ ಭಯವಾಗುತ್ತದೆ. ಮತ್ತೊಮ್ಮೆ ಹೇ ರಾಮ್ ಹೇಳುವಂತೆ ಮಾಡಿಬಿಡುತ್ತಾರೇನೋ ಎನಿಸುತ್ತದೆ. ನನ್ನನ್ನೇಕೆ ಕರೆದೆ ಮಗೂ? ನನ್ನ ಕನಸು ನುಚ್ಚುನೂರಾಗಿರುವುದನ್ನು ನೋಡಿ ಗೇಲಿ ಮಾಡುವೆಯಾ?
ಹೀಗೆ ಹೇಳುತ್ತಾ ಬಾಪು ತಮ್ಮ ಆಶ್ರಮದ ಕಡೆ ಹೆಜ್ಜೆ ಹಾಕುತ್ತಾರೆ. ಮರಳ ಮೇಲಿನ ಹೆಜ್ಜೆ ಗುರುತುಗಳನ್ನು ಅಳಿಸಿ ಹಾಕುತ್ತಾ ಹೋಗುವ ಕಸಬರಿಗೆಗಳ ಸಾಲು ಹಿಂದಿರುಗಿ ನೋಡುವ ಬಾಪುವಿಗೆ ದಂಡಿ ಯಾತ್ರೆಯನ್ನು ನೆನಪಿಸುತ್ತದೆ. ಬಾಪು ಸಾಬರಮತಿ ಆಶ್ರಮದೊಳಗೆ ಮರೆಯಾಗುತ್ತಾರೆ.
ಐದು ವರ್ಷದ ಹಸುಳೆಯೊಂದು, ಬಾಪೂ ಮತ್ತೊಮ್ಮೆ ಬರುವೆಯಾ? ಎಂದು ಕೇಳುತ್ತಲೇ ಇರುತ್ತದೆ.
ಕ್ಷೀಣ ದನಿಯೊಂದು ‘ಹೇ ರಾಮ್’ ಎನ್ನುತ್ತಲೇ ಮರೆಯಾಗುತ್ತದೆ.

share
ನಾ. ದಿವಾಕರ
ನಾ. ದಿವಾಕರ
Next Story
X