ಉತ್ತಮ ಆರೋಗ್ಯಕ್ಕಾಗಿ ಯೋಗ: ಪಲಿಮಾರುಶ್ರೀ
ರಾಮ್‌ದೇವ್ ಯೋಗ ಶಿಬಿರ ಕಾರ್ಯಾಲಯ ಉದ್ಘಾಟನೆ

ಉಡುಪಿ, ಅ.2: ಯೋಗಕ್ಕೆ ಯಾವುದೇ ಜಾತಿ, ಧರ್ಮಗಳ ಭೇದವಿಲ್ಲ. ಉತ್ತಮ ಆರೋಗ್ಯಕ್ಕೆ ಯೋಗ ಅಗತ್ಯವಾಗಿದ್ದು, ಯೋಗೇಶ್ವರ ಕೃಷ್ಣನ ನಾಡಿನಲ್ಲಿ ಯೋಗ ಶಿಬಿರ ನಡೆಯುತ್ತಿರುವುದು ಔಚಿತ್ಯಪೂರ್ಣ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಶ್ರೀಕೃಷ್ಣ ಮಠ ಹಾಗೂ ಪತಂಜಲಿ ಯೋಗ ಪೀಠ ಆಶ್ರಯದಲ್ಲಿ ನ.16ರಿಂದ 20ರತನಕ ನಡೆಯಲಿರುವ ಬಾಬಾ ರಾಮದೇವ್ ಅವರ ಉಚಿತ ಯೋಗ ಶಿಬಿರದ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮದ ಅಂಗವಾಗಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 101 ಕಡೆಗಳಲ್ಲಿ ಯೋಗ ಶಿಬಿರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಬೆಳಗ್ಗೆ ರಾಜಾಂಗಣದಲ್ಲಿ ಪ್ರಥಮ ಶಿಬಿರಕ್ಕೆ ಚಾಲನೆ ನೀಡಲಾಗಿದೆ ಎಂದರು.
ಪತಂಜಲಿ ಸಂಸ್ಥೆ ರಾಜ್ಯ ಪ್ರಭಾರಿ ಭವರಿಲಾಲ್ ಆರ್ಯ ಮಾತನಾಡಿ, ಕೆಲ ವರ್ಗಕ್ಕೆ ಮತ್ತು ಜನರಿಗೆ ಮಾತ್ರ ಸೀಮಿತವಾಗಿದ್ದ ಯೋಗವನ್ನು ಬಾಬಾ ರಾಮ್‌ದೇವ್ ಅವರು ಪತಂಜಲಿ ಯೋಗ ಪೀಠದ ಮೂಲಕ ಆಂದೋಲನ ರೂಪದಲ್ಲಿ ಜನಸಾಮಾನ್ಯರಿಗೂ ತಲುಪಿಸಿದ್ದಾರೆ. ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಯೋಗ ಶಿಬಿರ ನಡೆಯುವ ಕಾರಣ ಡಿ.3ರ ಬದಲು ನ.16ರಿಂದ 20ರವರೆಗೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದರು.
ರಾಜ್ಯ ಸಹ ಪ್ರಭಾರಿ ಡಾ. ಜ್ಞಾನೇಶ್ವರ ನಾಯಕ್, ಮಹಿಳಾ ಪ್ರಭಾರಿ ಸುಜಾತಾ ಮಾಲ್, ಜಿಲ್ಲಾ ಪ್ರಭಾರಿ ಕರಂಬಳ್ಳಿ ಶಿವರಾಮ ಶೆಟ್ಟಿ, ಜಿಲ್ಲಾ ಸಂರಕ್ಷಕ್ ಬಾಲಾಜಿ ರಾಘವೇಂದ್ರಾಚಾರ್ಯ, ಕಾರ್ಯದರ್ಶಿ ಅಜಿತ್ ಶೆಟ್ಟಿ, ಮಠದ ಪಿಆರ್‌ಒ ಕಡೆಕಾರ್ ಶ್ರೀಶ ಭಟ್, ಪ್ರಹ್ಲಾದ್ ಆಚಾರ್, ಸತೀಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.







