ಬಡ ಕೊರಗ ಮಹಿಳೆಗೆ ನಿರ್ಮಿಸಿಕೊಟ್ಟ ಮನೆ ಹಸ್ತಾಂತರ

ಉಡುಪಿ, ಅ.2: ಕಡಿಯಾಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಇಂದ್ರಾಳಿ ವಾರ್ಡಿನ ಮಂಜುಶ್ರೀ ನಗರದ ಮಂಚಿಕೋಡಿಯ ಕೊರಗ ಸಮುದಾಯದ ಮಹಿಳೆ ಸುಮತಿ ಅವರಿಗೆ ಹೊಸದಾಗಿ ನಿರ್ಮಿಸಿ ಕೊಡಲಾದ ಹೊಸ ಮನೆಯನ್ನು ಬುಧವಾರ ಹಸ್ತಾಂತರಿಸಲಾಯಿತು.
2.20ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮನೆಯನ್ನು ಸೋಲಾರ್ ದೀಪದ ಗುಂಡಿ ಒತ್ತುವ ಮೂಲಕ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿ ದರು. ಕೊರಗ ಸಮುದಾಯದ ಶೈಕ್ಷಣಿಕ, ಆರೋಗ್ಯ ಹಾಗೂ ಪೌಷ್ಠಿಕಾಂಶಯುಕ್ತ ಆಹಾರ ಪೂರೈಕೆಗೆ ಕೆಲ ನ್ಯೂನತೆಗಳಿಂದ ಸಮಸ್ಯೆಯಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಶೀಘ್ರವೇ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಈ ಹಿಂದೆ ಪೂರೈಕೆಯಾಗುತ್ತಿದ್ದ ಎಲ್ಲಾ ಸೌಲಭ್ಯಗಳು ಮತ್ತೆ ಸಿಗುವಂತೆ ಮಾಡಲಾಗುವುದು ಎಂದರು.
ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭಾ ಸದಸ್ಯರಾದ ರಜನಿ ಹೆಬ್ಬಾರ್, ಗೀತಾ ಶೇಟ್, ಗಿರೀಶ್ ಎಂ.ಅಂಚನ್, ರಾಜು, ಭಾರತಿ ಪ್ರಶಾಂತ್, ಪ್ರಭಾಕರ್ ಪೂಜಾರಿ, ಮಂಜುನಾಥ ಮಣಿಪಾಲ, ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ವಸಂತ ಭಟ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.
ಮಂಚಿಕೋಡಿ ಪಿ.ಸುಂದರ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಅಶೋಕ ನಾಯ್ಕ ಸ್ವಾಗತಿಸಿದರು. ರವೀಂದ್ರ ನಾಯಕ್ ವಂದಿಸಿದರು.





