ಸರ್ವಧರ್ಮಗಳ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳದ ನೂತನ ಬಿಬಿಎಂಪಿ ಮೇಯರ್
ಬೆಂಗಳೂರು,ಅ.2: ಮಹಾತ್ಮಗಾಂಧೀ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮಗಳ ಪ್ರಾರ್ಥನೆಗೆ ನೂತನ ಮೇಯರ್ ಗೌತಮ್ ಕುಮಾರ್ ಜೈನ್ ತಲೆನೋವಿನ ಕಾರಣ ನೀಡಿ ಗೈರು ಹಾಜರಾಗಿದ್ದು, ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.
ಬಿಬಿಎಂಪಿಯಲ್ಲಿ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಮೈತ್ರಿ ಆಡಳಿತ ಅಂತ್ಯಗೊಳಿಸಿ ಬಿಜೆಪಿಯ ನೂತನ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲನೆ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಇದ್ದದ್ದು ಚರ್ಚೆಗೆ ಗ್ರಾಸವಾಗಿದೆ.
ಪಾಲಿಕೆ ವತಿಯಿಂದ ನಗರದ ಎಂ.ಜಿ.ರಸ್ತೆಯಲ್ಲಿರುವ ಗಾಂಧೀಜಿ ಪ್ರತಿಮೆ ಬಳಿ ಮಾರ್ಲಾಪಣೆ ಹಾಗೂ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಮೇಯರ್ ಪಾಲ್ಗೊಂಡಿರಲಿಲ್ಲ. ಈ ಸಂಬಂಧ ಕರೆ ಮಾಡಿದ ಮಾಧ್ಯಮದವರಿಗೆ ತಲೆನೋವು ಇದ್ದುದರಿಂದ ಬರಲಿಲ್ಲ ಎಂದು ಉತ್ತರ ನೀಡಿದ್ದಾರೆ.
ಇದೇ ವೇಳೆ 10 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲು ತೆರಳಿದ್ದರು. ಸಿಎಂ ಭೇಟಿ ಸಂದರ್ಭದಲ್ಲಿ ತಮ್ಮ ತಪ್ಪಿನ ಅರಿವಾಗಿ ಗೌತಮ್ ಕುಮಾರ್, ನಿನ್ನೆಯ ಕಾರ್ಯದ ಒತ್ತಡದ ಹಿನ್ನೆಲೆಯಲ್ಲಿ ತಲೆನೋವು ಬಂದಿದ್ದರಿಂದ ಪ್ರಾರ್ಥನೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ, ಈ ಹೇಳಿಕೆಗಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.