ಮುಂಬೈ ಬಿಜೆಪಿ ಅಧ್ಯಕ್ಷ ಮಂಗಲ್ ಪ್ರಭಾತ್ ಆಸ್ತಿಯ ಮೌಲ್ಯ 441 ಕೋಟಿ ರೂ.

ಮುಂಬೈ, ಅ.2: ಮುಂಬೈಯ ಮಲಬಾರ್ ಹಿಲ್ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭೆಗೆ ಸ್ಪರ್ಧಿಸುತ್ತಿರುವ ಮುಂಬೈ ಬಿಜೆಪಿ ಅಧ್ಯಕ್ಷ ಮಂಗಲ್ ಪ್ರಭಾತ್ ಲೋಧಾ ತಮ್ಮ ಆಸ್ತಿ ಮೌಲ್ಯ 441 ಕೋಟಿ ರೂ. ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಘೋಷಿಸಿದ್ದಾರೆ.
ಸತತ 6ನೇ ಬಾರಿಗೆ ವಿಧಾನಸಭೆಗೆ ಪ್ರವೇಶ ಬಯಸಿರುವ 63 ವರ್ಷದ ಲೋಧಾ ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ತನ್ನ ಮತ್ತು ಪತ್ನಿಯ ಹೆಸರಿನಲ್ಲಿ 252 ಕೋಟಿ ರೂ. ಮೌಲ್ಯದ ಚರಾಸ್ತಿ, 189 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಘೋಷಿಸಿದ್ದಾರೆ. 14 ಲಕ್ಷ ರೂ. ಮೌಲ್ಯದ ಜಾಗ್ವಾರ್ ಕಾರು ಹಾಗೂ ಶೇರು ಮತ್ತು ಬಾಂಡ್‌ಗಳಲ್ಲಿ ಹೂಡಿಕೆ ಮಾಡಿರುವುದಾಗಿ ವಿವರಿಸಿದ್ದಾರೆ. ತನಗೆ 238 ಕೋಟಿ ರೂ. ಸಾಲ ಇರುವುದಾಗಿಯೂ ತಿಳಿಸಿದ್ದಾರೆ.
ಲೋಧಾ ಕುಟುಂಬದವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು ದಕ್ಷಿಣ ಮುಂಬೈಯಲ್ಲಿ 5 ಅಪಾರ್ಟ್‌ಮೆಂಟ್‌ಗಳು ಹಾಗೂ ರಾಜಸ್ತಾನದಲ್ಲಿ ಪ್ಲಾಟ್ ಹೊಂದಿದ್ದಾರೆ. ಲೋಧಾಗೆ ಮಲಬಾರ್ ಹಿಲ್ಸ್ ಪ್ರದೇಶದಲ್ಲಿ ಒಂದು ಮನೆಯಿದ್ದರೆ, ಅವರ ಪತ್ನಿ ಮಲಬಾರ್ ಹಿಲ್ಸ್ ಪ್ರದೇಶದಲ್ಲಿ ಒಂದು ಮನೆ ಮತ್ತು ದಕ್ಷಿಣ ಮುಂಬೈಯಲ್ಲಿ ವಾಣಿಜ್ಯ ಮಳಿಗೆ ಹೊಂದಿದ್ದಾರೆ. ಲೋಧಾ ವಿರುದ್ಧ ಐದು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ವಿಚಾರಣೆಯ ಹಂತದಲ್ಲಿವೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದೆ.







