ಕಟಪಾಡಿಯಲ್ಲಿ ವಿಶ್ವಕರ್ಮ ಮಹಾಯಜ್ಞ
ಉಡುಪಿ, ಅ.2: ಉಡುಪಿಯ ಶಿಲ್ಪ ಬ್ರಾಹ್ಮಣ ವೈಶ್ವಕರ್ಮಣ ಮಹಾಯಜ್ಞ ಸಮಿತಿ, ಮೂಡಬಿದ್ರೆಯ ನಾರಾಯಣ ವಿಠಲ ಆಚಾರ್ಯರ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಕಳೆದ 9 ವರ್ಷಗಳಿಂದ ಲೋಕಕಲ್ಯಾಣಾರ್ಥ ವಿಶ್ವಕರ್ಮ ಯಜ್ಞವನ್ನು ನಡೆಸಿಕೊಂಡು ಬಂದಿದ್ದು, ದಶಮಾನೋತ್ಸದ ಅಂಗವಾಗಿ ಮುಂದಿನ ಜನವರಿಯಲ್ಲಿ ಶ್ರೀವಿಶ್ವಕರ್ಮಾಷ್ಟಕ್ಷರೀ ಕೋಟಿ ಲೇಖಿ ಜಪಸಹಿತ ವಿಶ್ವಕರ್ಮ ಮಹಾಯಜ್ಞವನ್ನು ನಡೆಸಲು ತೀರ್ಮಾನಿಸಿದೆ ಎಂದು ಸಮಿತಿಯ ಕೋಶಾಧಿಕಾರಿ ಗಣೇಶ ಹಿರಿಯಡ್ಕ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 2020ರ ಜ.4 ಮತ್ತು 5ರಂದು ನಡೆಯುವ ಮಹಾಯಜ್ಞಕ್ಕೆ ಪೂರ್ವ ಭಾವಿಯಾಗಿ ಇದೇ ಅ.5ರ ಶನಿವಾರ ಅಷ್ಟಾಕ್ಷರಿ ಮಹಾಮಂತ್ರದ ಉಪದೇಶ ಹಾಗೂ ಲೇಖಿ ಜಪ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಕಟಪಾಡಿಯ ತೆಂಕಾರು ಮಾಗಣೆ ವೇಣುಗಿರಿ ಶ್ರೀಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ ಎಂದರು.
ಅ.5ರ ಬೆಳಗ್ಗೆ 10ರಿಂದ 11:00ಗಂಟೆಯವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದ್ವಾನ್ ಚಂದ್ರೇಶ ಶರ್ಮ ಅವರು ಮಹಾ ಮಂತ್ರೋಪದೇಶವನ್ನು ಬೋಧಿಸಲಿದ್ದಾರೆ. ಅಷ್ಟಾಕ್ಷರಿ ಮಹಾಮಂತ್ರೋಪದೇಶ ವನ್ನು ಪಡೆಯಲಿಚ್ಛಿಸುವವರು ಅಂದು ಬೆಳಗ್ಗೆ 10ಗಂಟೆಗೆ ದೇವಸ್ಥಾನದಲ್ಲಿ ಧಾರ್ಮಿಕ ಉಡುಪಿನೊಂದಿಗೆ ಉಪಸ್ಥಿತರಿರುವಂತೆ ಅವರು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ನಿತ್ಯಾನಂದ ಎನ್.ಆಚಾರ್ಯ, ಉಪಾಧ್ಯಕ್ಷ ಶೇಖರ ಆಚಾರ್ಯ, ವಾದಿರಾಜ ಆಚಾರ್ಯ, ಕೇಶವ ಆಚಾರ್ಯ ಹಾಗೂ ಗಣೇಶ ಆಚಾರ್ಯ ಉಪಸ್ಥಿತರಿದ್ದರು.







