ಗಾಂಧಿ 150- ಕಾಂಗ್ರೆಸ್‌ನಿಂದ ಕಾಲ್ನಡಿಗೆ ಜಾಥಾ

ಮಂಗಳೂರು, ಅ.2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಪ್ರಯುಕ್ತ ಬುಧವಾರ ಸಂಜೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಕರಾವಳಿ ಮೈದಾನದಿಂದ ಪುರಭವನದವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.
ಕಾಲ್ನಡಿಗೆ ಜಾಥಾದಲ್ಲಿ ಜಿಲ್ಲೆಯ ಎಂಟು ವಿಧಾನಕ್ಷೇತ್ರಗಳಾದ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಉಳ್ಳಾಲ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡುಬಿದಿರೆ, ಬಂಟ್ವಾಳದಿಂದ ಆಗಮಿಸಿದ ಐದು ಸಾವಿರಕ್ಕೂ ಅಧಿಕ ಜನರು ಉತ್ಸಾಹದಿಂದ ಪಾಲ್ಗೊಂಡರು. ಯುವಕರಿಂದ ವಯೋವೃದ್ಧರು ಜಾಥಾದ ಉದ್ದಕ್ಕೂ ಉದ್ಘೋಷಗಳನ್ನು ಕೂಗಿದರು. ‘ನುಡಿದಂತೆ ನಡೆ’ ಹೆಸರಿನ ಬರಹಗಳ ನಾಮಫಲಕಗಳು, ಕೇಸರಿ, ಬಿಳಿ, ಹಸಿರು, ಚರಕವನ್ನೊಳಗೊಂಡ ಬಾವುಟಗಳು ಜಾಥಾದಲ್ಲಿ ಪಾಲ್ಗೊಂಡ ಶ್ವೇತವರ್ಣದ ದಿರಿಸಿನಲ್ಲಿದ್ದವರ ಕೈಯಲ್ಲಿ ರಾರಾಜಿಸಿದವು. ಕಾಲ್ನಡಿಗೆಯುದ್ದಕ್ಕೂ ಬ್ಯಾಂಡ್ ವಾದ್ಯಗಳು ಸದ್ದು ಮಾಡಿದವು.
ಮಂಗಳೂರಿನ ಕರಾವಳಿ ಉತ್ಸವ ಮೈದಾನದಿಂದ ಆರಂಭವಾದ ಕಾಲ್ನಡಿಗೆ ಜಾಥಾವು ಲಾಲ್‌ಭಾಗ್, ಎಂ.ಜಿ. ರೋಡ್, ಪಿ.ವಿ.ಎಸ್. ಸರ್ಕಲ್, ಬಂಟ್ಸ್ ಹಾಸ್ಟೇಲ್, ಅಂಬೇಡ್ಕರ್ ಸರ್ಕಲ್ ಜ್ಯೋತಿ ಮಾರ್ಗವಾಗಿ ಹಂಪನಕಟ್ಟೆಯ ಎ.ಬಿ.ಶೆಟ್ಟಿ (ಆರ್‌ಟಿಒ ಕಚೇರಿ) ಸರ್ಕಲ್ ಮೂಲಕ ನಗರದ ಕುದ್ಮುಲ್ ರಂಗರಾವ್ ಪುರಭವನದ ಎದುರು ಸಮಾರೋಪಗೊಂಡಿತು.
ಪುರಭವನದ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಎಐಸಿಸಿ ಕಾರ್ಯದರ್ಶಿ, ಮೈಸೂರು ವಿಭಾಗದ ಉಸ್ತುವಾರಿ ಪಿ.ಸಿ. ವಿಷ್ಣುನಾಥನ್ ಹಾಗೂ ಫೋರಮ್ ಫಾರ್ ಜಸ್ಟೀಸ್‌ನ ಅಧ್ಯಕ್ಷ ದಯಾನಾಥ ಕೋಟ್ಯಾನ್ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು.
ಬಳಿಕ ಪುರಭವನದ ಮುಂಭಾಗದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಫೋರಮ್ ಫಾರ್ ಜಸ್ಟೀಸ್‌ನ ಅಧ್ಯಕ್ಷ ದಯಾನಾಥ ಕೋಟ್ಯಾನ್, ದೇಶದಲ್ಲಿ ಪ್ರಸಕ್ತ ದಿನಗಳು ವಿಪ್ಲವದಿಂದ ಕೂಡಿವೆ. ಸಂವಿಧಾನವನ್ನು ತಿದ್ದುಪಡಿ ಮಾಡದೇ ಸ್ವ-ಹಿತಾಸಕ್ತಿಯಿಂದ ರಾಜ್ಯಗಳನ್ನು ಇಬ್ಭಾಗ ಮಾಡಲಾಗುತ್ತಿದೆ. ಇಂದು ಕಾಶ್ಮೀರ ಇಬ್ಭಾಗವಾದರೆ ನಾಳೆ ಕರ್ನಾಟಕವೂ ಇಬ್ಭಾಗವಾಗಬಹುದು. ಕಾಶ್ಮೀರವನ್ನು ತುಂಡು ತುಂಡಾಗಿ ಮಾಡಿದ ಕೇಂದ್ರ ಸರಕಾರದ ನಿಲುವನ್ನು ದೇಶದ ಜನತೆ ಖಂಡಿಸಿ ಹೋರಾಟಕ್ಕಿಳಿಯದಿದ್ದರೆ ಮುಂದೆ ಇನ್ನೂ ಭಯಂಕರವಾದ ಕೆಟ್ಟ ದಿನಗಳು ಬರುವುದು ನಿಶ್ಚಿತ ಎಂದು ಹೇಳಿದರು.
ಗೌತಮ ಬುದ್ಧ ಅಹಿಂಸೆಯ ಪ್ರತೀಕ. ಬುದ್ಧ ಗತಿಸಿದ ಸಹಸ್ರಾರು ವರ್ಷಗಳ ನಂತರ ಗಾಂಧೀಜಿಯ ಹೆಸರಲ್ಲಿ ಮತ್ತೊಬ್ಬ ಬುದ್ಧ ಜನ್ಮತಾಳಿದ. ಇಡೀ ಜಗತ್ತನ್ನೇ ಗೆದ್ದು ಬೀಗಿದ್ದ ಬ್ರಿಟಿಷರು ಗಾಂಧೀಜಿ ಮುಂದೆ ಮಂಡಿಯುರಿದ್ದರು. ಗಾಂಧೀಜಿಯ ಸತ್ಯ, ಅಹಿಂಸೆ, ಸತ್ಯಾಗ್ರಹಕ್ಕೆ ಆಂಗ್ಲರು ತತ್ತರಿಸಿ ಹೋಗಿದ್ದರು. ಸತ್ಯಕ್ಕೆ ಬಲವಿದೆ ಎಂದು ಗಾಂಧೀಜಿ ತೋರಿಸಿಕೊಟ್ಟಿದ್ದರು ಎಂದರು.
ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗದ ಉಸ್ತುವಾರಿ ಪಿ.ಸಿ. ವಿಷ್ಣುನಾಥನ್ ಮಾತನಾಡಿ, ದೇಶದಲ್ಲಿ ಧರ್ಮಗಳ ಹೆಸರಲ್ಲಿ ಹತ್ಯೆ, ಥಳಿತ, ಬೆದರಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಧರ್ಮದ ವಿರುದ್ಧ ಹೋರಾಡಲು ಅಹಿಂಸೆಯೊಂದೇ ಪ್ರಬಲ ಅಸ್ತ್ರ. ಗಾಂಧೀಜಿಯ ಭರವಸೆಗಳೇ ದೇಶವನ್ನು ಕಾಪಾಡಬೇಕಿದೆ ಎಂದರು.
ಗಾಂಧೀಜಿ ವ್ಯಕ್ತಿಯಲ್ಲ; ಅವರೊಂದು ಅಪ್ರತಿಮ ಸಿದ್ಧಾಂತ. ಗೋಡ್ಸೆಯಂಥ ನೂರು ಮಂದಿ ಗುಂಡು ಹಾಕಿದರೂ ಗಾಂಧೀಜಿ ಸಿದ್ಧಾಂತ ದೇಶದಲ್ಲಿ ಇಮ್ಮಡಿಗೊಳ್ಳುತ್ತದೆ. ಪ್ರೀತಿ, ವಿಶ್ವಾಸ, ಸತ್ಯ, ಅಹಿಂಸೆಯಿಂದ ಇನ್ನೊಬ್ಬರನ್ನು ಗೆಲ್ಲಲು ಸಾಧ್ಯವಾಗುತ್ತದೆ ಎನ್ನುವುದನ್ನು ಗಾಂಧೀಜಿ ಪ್ರಪಂಚಕ್ಕೇ ತಿಳಿಸಿಕೊಟ್ಟಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾಲ್ನಡಿಗೆ ಜಾಥಾವು ರಾಜ್ಯದ ಕಾಂಗ್ರೆಸ್ ಘಟಕಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಮಾಜಿ ಸಚಿವರಾದ ಬಿ.ರಮಾನಾಥ ರೈ, ಶಾಸಕ ಯು.ಟಿ.ಖಾದರ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದೀನ್ ಬಾವ, ಅಭಯಚಂದ್ರ ಜೈನ್, ವಸಂತ ಬಂಗೇರಾ, ಶಕುಂತಲಾ ಶೆಟ್ಟಿ, ಗಂಗಾಧರ ಶೆಟ್ಟಿ ಹಾಗೂ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ, ಡಾ.ರಘು ಮತ್ತಿತರರು ಉಪಸ್ಥಿತರಿದ್ದರು.









