ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರ ಸ್ಥಾಪನೆ: ಬಿ.ಎಸ್.ಯಡಿಯೂರಪ್ಪ
ಬೆಂಗಳೂರು, ಅ.2: ತಮ್ಮ ಅಹಿಂಸಾ ಚಿಂತನೆಗಳ ಮೂಲಕ ದೇಶಕ್ಕೆ ಸ್ವಾಂತಂತ್ರ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹತ್ಮಾ ಗಾಂಧೀಜಿಯ ಮೌಲ್ಯಗಳನ್ನು ಯುವ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ವಿಶ್ಯವಿದ್ಯಾಲಯದಲ್ಲಿ ಗಾಂಧಿ ಅಧ್ಯಯನ ಕೇಂದ್ರವನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬುಧವಾರ ಗಾಂಧಿಭವನದಲ್ಲಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಬಾ-ಬಾಪು 150ನೇ ಜನ್ಮ ವರ್ಷಾಚರಣೆ, ರಾಷ್ಟ್ರೀಯ ಸೇವಾ ಯೋಜನೆ ಸುವರ್ಣ ಮಹೋತ್ಸವ ಸಮಾರೋಪದಲ್ಲಿ ಅವರು ಮಾತನಾಡಿದರು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ನಿರ್ಣಯ ಕೈಗೊಳ್ಳಲಾಗಿದ್ದು, ಬಳ್ಳಾರಿ, ಮಡಿಕೇರಿ, ಹಾಸನ, ಚಿಕ್ಕಬಳ್ಳಾಪುರದಲ್ಲಿ ಕಟ್ಟಡ ನಿರ್ಮಾಣದ ವಿವಿಧ ಹಂತದಲ್ಲಿದೆ. ಜೊತೆಗೆ 25 ಜಿಲ್ಲೆಗಳಿಗೆ ತಲಾ 3 ಕೋಟಿಯಂತೆ ಒಟ್ಟು 75 ಕೋಟಿಯನ್ನು, 5 ಜಿಲ್ಲೆಗಳಿಗೆ 20 ಲಕ್ಷದಂತೆ 1 ಕೋಟಿ ರೂ.ವನ್ನು ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಗಾಂಧೀಜಿ ತತ್ವಗಳನ್ನು ಜೀವಂತವಾಗಿರಿಸಲು ಸರಕಾರದ ಕಡೆಯಿಂದ ಗಾಂಧಿಭವನ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಉತ್ತಮ ಕಾರ್ಯವಾಗಿದೆ. ಇನ್ನು ಒಂದೂವರೆ ವರ್ಷದಲ್ಲಿ ರಾಜ್ಯದೆಲ್ಲೆಡೆ ಗಾಂಧಿಭವನ ಕಾರ್ಯನಿರ್ವಹಿಸುವಂತೆ ಮಾಡುತ್ತೇನೆ. ಜೊತೆಗೆ ಬೆಂಗಳೂರಿನಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಅಂತರ್ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಲು ಸರಕಾರದ ಕಡೆಯಿಂದ ಎಲ್ಲಾ ಸಹಾಯ ದೊರೆಯುತ್ತದೆ ಎಂದು ಅವರು ತಿಳಿಸಿದರು.
ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಕರ್ನಾಟಕವನ್ನು ಬಯಲು ಬರ್ಹಿದೆಸೆ ಮುಕ್ತ ರಾಜ್ಯವನ್ನು ಮಾಡಲು ಕೇವಲ ಶೌಚಾಲಯಗಳನ್ನು ಕಟ್ಟಿಸುವುದು ಮಾತ್ರವಲ್ಲ ಅದನ್ನು ಬಳಸಿ ಪರಿಸರವನ್ನು ಸ್ವಚ್ಛವಾಗಿ ಇಡುವುದು ನಮ್ಮ ಕರ್ತವ್ಯ ಎಂದರು.
ಗಾಂಧೀಜಿ ಕೇವಲ ನಮ್ಮ ರಾಷ್ಟ್ರಕ್ಕೆ ಮಾತ್ರ ಸೀಮಿತವಾದವರಲ್ಲ. ಅವರು ಮನುಕುಲಕ್ಕೆ ಆದರ್ಶ ವ್ಯಕ್ತಿ. ಗಾಂಧೀಜಿ ಅವರ ತತ್ವ ಸಿದ್ಧಾಂತಗಳು ವಿಮರ್ಶೆಗೆ ಒಳಪಟ್ಟಿವೆಯೇ ಹೊರತು ಟೀಕೆಗಳಿಗಳಲ್ಲ. ಇಂದು ಅವರ ಆದರ್ಶ, ಚಿಂತನೆ, ಸಂದೇಶ, ಪ್ರಾಮಾಣಿಕತೆ, ಮಾರ್ಗದರ್ಶನವು ಎಲ್ಲಾ ಕ್ಷೇತ್ರದಲ್ಲಿ ಕಲುಷಿತಗೊಂಡಿದೆ ಇದನ್ನು ಸರಿಪಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಲಾರ ಮಹಾದೇವ ಸಭಾಂಗಣ ಮತ್ತು ಗಾಂಧಿ ಪುಸ್ತಕೋತ್ಸವ ಮತ್ತು ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಗಾಂಧಿ 150 ಮತ್ತು ಗಾಂಧಿ ಭವನ ವಿಶೇಷ ಲಕೋಟೆಯನ್ನು ಲೋಕಾರ್ಪಣೆ ಮಾಡಲಾಯಿತು. ಜೊತೆಗೆ ಜಾನಪದ ಸಾಂಸ್ಕೃತಿಕ ನೃತ್ಯಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಹಚ್ಚಿದವು.
ಈ ವೇಳೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೆಚ್ಚುವರಿ ಮಹಾ ನಿರ್ದೇಶಕ ಎಂ.ನಾಗೇಂದ್ರಸ್ವಾಮಿ, ಪ್ರಧಾನ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೋ. ಹಿರಿಯ ಸ್ವಾತಂತ್ರ ಹೋರಾಟಗಾರ ಸೂ.ರಂ.ರಾಮಯ್ಯ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕಷ್ಣ, ಧೀನಬಂಧು ಮಕ್ಕಳ ಮನೆ ಸಂಸ್ಥಾಪಕ ಜಿ.ಎಸ್.ಜಯದೇವ ಮತ್ತಿತರರಿದ್ದರು.