ದೇಶದಲ್ಲಿ ಜೀತ ಪದ್ಧತಿ ಇನ್ನೂ ಜೀವಂತ: ನ್ಯಾ.ಪಿ.ಕೃಷ್ಣಭಟ್
ಬೆಂಗಳೂರು, ಸೆ.2: ಕೂಲಿ ಕಾರ್ಮಿಕರು, ಮಹಿಳೆಯರ ಹಕ್ಕು ಹಾಗೂ ಸ್ವಾತಂತ್ರವನ್ನು ರಕ್ಷಣೆ ಮಾಡುವ ಅಗತ್ಯವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪಿ.ಕೃಷ್ಣ ಭಟ್ ಹೇಳಿದ್ದಾರೆ.
ಬುಧವಾರ ನಗರದ ಸಿಟಿ ಸಿವಿಲ್ ಕೋರ್ಟ್‌ನ ವಕೀಲರ ಸಂಘದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ 150ನೆ ಜಯಂತ್ಯುತ್ಸವದ ಅಂಗವಾಗಿ ಜೀತ ಕಾರ್ಮಿಕ ಪದ್ಧತಿ ಮತ್ತು ಮಾನವ ಕಳ್ಳ ಸಾಗಾಣಿಕೆ ನಿರ್ಮೂಲನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಸಾಕಷ್ಟು ಹೋರಾಟ ಮಾಡಿದ್ದರು. ರಾಮ ರಾಜ್ಯ ನಿರ್ಮಾಣವಾಗಬೇಕು. ಮಧ್ಯರಾತ್ರಿ ಮಹಿಳೆ ಸ್ವತಂತ್ರಳಾಗಿ ನಡೆದಾಡಬೇಕು ಎಂಬ ಕನಸು ಕಂಡಿದ್ದರು. ಆದರೆ, ದೇಶದಲ್ಲಿ ಗಾಂಧೀಜಿ ಅವರ 150ನೆ ಜಯಂತಿ ಆಚರಿಸುತ್ತಿದ್ದರೂ ಸಹ ಜೀತ ಪದ್ಧತಿ, ಮಾನವ ಕಳ್ಳ ಸಾಗಾಣಿಕೆ ಇನ್ನೂ ಜೀವಂತವಾಗಿರುವುದು ವಿಷಾದನೀಯ ಸಂಗತಿ. ಹೀಗಾಗಿ, ಸಾರ್ವಜನಿಕರು ಈ ಎಲ್ಲ ಸಂಗತಿಗಳ ಕುರಿತು ಜಾಗೃತರಾಗಬೇಕಿದೆ ಎಂದು ಕರೆ ನೀಡಿದರು.
ಭಾರತೀಯ ಧರ್ಮ, ಸಿದ್ಧಾಂತಗಳು ಸಮಾಜದಲ್ಲಿ ಹೆಣ್ಣು, ಗಂಡು ಸಮಾನರು ಎನ್ನುತ್ತವೆ. ಆದರೆ, ಇತ್ತೀಚೆಗೆ ಲಿಂಗ ಸಮಾನತೆ ಬದಲಾಗಿ ಲಿಂತ ತಾರತಮ್ಯ ಹೆಚ್ಚಾಗುತ್ತಿದ್ದು, ದೇಶದಲ್ಲಿ ಪುರುಷ ಪ್ರಧಾನಕ್ಕೆ ಹೆಚ್ಚು ಗಮನ ಕೊಡಲಾಗುತ್ತಿದೆ. ಈ ಮೂಲಕ ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚಾಗುತ್ತಿವೆ. ಈಗಾಗಲೇ ಹರಿಯಾಣದಲ್ಲಿ ಸಾವಿರ ಪುರುಷರಿಗೆ 900ಕ್ಕೂ ಕಡಿಮೆ ಮಹಿಳೆಯರಿದ್ದು, ಬೇರೆ ರಾಜ್ಯದ ಮಹಿಳೆಯರನ್ನ ವಿವಾಹವಾಗಲು ಮುಂದಾಗುತ್ತಿದ್ದಾರೆ. ಹೀಗಾಗಿ, ಈ ಕುರಿತು ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳದಿದ್ದರೆ, ದೇಶದಾದ್ಯಂತ ಲಿಂಗ ಅಸಮಾನತೆ ಹೆಚ್ಚಾಗಲಿದೆ ಎಂದು ತಿಳಿಸಿದರು.
ಕೂಲಿ ಕಾರ್ಮಿಕರನ್ನ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತದೆ. ಮಧ್ಯವರ್ತಿಗಳು ಹಾಗೂ ಮಾಲಕರು ಅವರಿಗೆ ಅಗತ್ಯ ಸೌಲಭ್ಯ ಒದಗಿಸುವುದಿಲ್ಲ, ಕಾನೂನು ಹಕ್ಕುಗಳನ್ನು ಚಲಾಯಿಸಲು ಬಿಡುತ್ತಿಲ್ಲ. ಹೀಗಾಗಿ, ಇದರ ನಿವಾರಣೆಗೆ ಸಂವಿಧಾನದಲ್ಲಿ ಜೀತ ಕಾರ್ಮಿಕ ಪದ್ಧತಿ(ನಿರ್ಮೂಲನೆ) ಅಧಿನಿಯಮ ಜಾರಿಯಲ್ಲಿದ್ದು, ಪ್ರತಿಯೊಬ್ಬರೂ ಇದರಡಿ ನ್ಯಾಯ ಪಡೆದುಕೊಳ್ಳಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಎಂ.ವಿಜಯಕುಮಾರ್ ಪಾವಲೆ, ಜೆ.ವಿ.ವಿಜಯನಂದ, ವಕೀಲದ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಇಂಟರ್ ನ್ಯಾಷನಲ್ ಜಸ್ಟಿಸ್ ಮಿಷನ್‌ನ ನಿರ್ದೇಶಕ ಇಂದ್ರಜಿತ್ ಪವಾರ್ ಉಪಸ್ಥಿತರಿದ್ದರು.